Friday, August 13, 2010

ನನ್ನೊಲವಿನ "ಕುಡಿ"ಗಳು

ಬೆಂಗಳೂರಿನ "ಮದಿರಾಕ್ಷಿ"ಯರಿಗೆ ಯಾವ ಬಟ್ಟೆ ತೊಡಿಸಬೇಕೆಂದು ಪೋಲಿಸ್ ಅಧಿಕಾರಿಯೊಬ್ಬರು ಬಾರ್, ಕ್ಲಬ್, ಪಬ್ ಮಾಲೀಕರಿಗೆ ತಾಕೀತು ಮಾಡಿದ್ದಾರಂತೆ. "ತುಂಡು" ಬಟ್ಟೆಯಿಂದಾಗಿ ಗುಂಡು ಹಾಕುವ ಮುನ್ನವೇ ಬರುವ ಜನಗಳಿಗೆ ಮತ್ತೇರಬಾರದೆಂದು ಅವರ ಈ ಕ್ರಮದ ಹಿಂದಿನ ಉದ್ದೇಶವಿರಬಹುದು. ಅಥವಾ "ಸಭ್ಯ" ಬಟ್ಟೆ ತೊಟ್ಟು ಅಸಭ್ಯ ಕೆಲಸ ಮಾಡಿರಿ ಎಂಬ ಕಿವಿಮಾತು ಹೇಳಲೆತ್ನಿಸುತ್ತಿರಲೂಬಹುದು. ಅದೇನೇ ಇದ್ದರೂ ಇವರ ಹೇಳಿಕೆ ತೀರಾ ಹಾಸ್ಯಾಸ್ಪದವೆನಿಸುತ್ತದೆ. "ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು" ಎಂದು ಮಾಲಾಶ್ರೀ ಹಾಡಿರುವಾಗ ಇನ್ನು ಗಂಡಿನೊಳಗೆ ಗುಂಡು ಹೊಕ್ಕರೆ?! ಅವನ ಅವತಾರ ಹೇಗಿರಬಹುದು, ಮಾಡುವ ಅವಾಂತರ ಯಾವ ರೀತಿಯದ್ದಿರಬಹುದು. "ಸಭ್ಯ ಬಟ್ಟೆ", ಹುಡುಗಿಯರನ್ನು ಎಷ್ಟರ ಮಟ್ಟಿಗೆ ಕಿರುಕುಳದಿಂದ ರಕ್ಷಿಸಬಹುದು?


ನನ್ನ ಅಪ್ತ ಗೆಳೆಯರಲ್ಲಿ ಹಲವರು "ಮಧ್ಯ ಪ್ರಿಯ"ರು. ಇವರನ್ನು ಪ್ರೀತಿಯಿಂದ "ಕುಡಿ"ಗಳೆನ್ನುತ್ತೇವೆ ನಾವೆಲ್ಲಾ. ಕಾಲೇಜಿನಲ್ಲಿದ್ದಾಗ, ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಹೆಚ್ಚಾಗಿ ಗುಂಡು ಹಾಕುತ್ತಿದ್ದ ಗೆಳೆಯರೊಂದಿಗೆ ಕೈಯಲ್ಲೊಂದು ಪೆಪ್ಸಿ ಟಿನ್ ಹಿಡಿದು ನಾನೂ ಕುಳಿತಿರುತ್ತಿದ್ದೆ. ಕುಡಿದ ಅಮಲಿನಲ್ಲಿ ಅವರಾಡುವ ಮಾತುಗಳು, ಅವರ ಹಾವ ಭಾವ, ನಗೆ, ಕುಣಿತಗಳೆಲ್ಲಾ ಪೆಚ್ಚಾಗಿ ಕುಳಿತಿರುತ್ತಿದ್ದ ನನಗೊಂದು ಪುಕ್ಕಟೆ ಮನರಂಜನೆ!. ಅಥವಾ ಈ ಕಾರಣದಿಂದಲೇ ಅವರೊಂದಿಗೆ ಕುಳಿತಿರುತ್ತಿದ್ದೆ ಎನ್ನಬಹುದೇನೋ. ಕುಡಿತದ ಮತ್ತಿನಲ್ಲಿ ಪುರುಷನೊಬ್ಬ ಪ್ರಾಮಾಣಿಕನಾಗುವುದು, ಭಾವುಕನಾಗುವುದು, ಕ್ರೌರ್ಯ ರೂಪ ತಾಳುವುದನ್ನು ನಾನು ಹಲವಾರು ಬಾರಿ, ಹಲವಾರು ಪ್ರಾತ್ಯಕ್ಷಿಕೆಗಳ ಮೂಲಕ ಕಂಡಿದ್ದೇನೆ. ಕೆಲವೊಮ್ಮೆ ಇವರುಗಳ ಅವತಾರ, ಅವಾಂತರವನ್ನು ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡುವ "ಸ್ಟಿಂಗ್ ಆಪರೇಶನ್"ಗೂ ಕೈಹಾಕಿದ್ದುಂಟು.


ನಾನು ನೋಡಿರುವ ಕುಡಿಗಳಲ್ಲಿ ಹೆಚ್ಚಿನವರು ಅತಿಭಾವುಕರಾಗುವ "ಭಾವುಕ ಕುಡಿ"ಗಳು. ಇವರು ಹೆಚ್ಚಾಗಿ "ಒತ್ತಡ"ದಲ್ಲಿದ್ದೇನೆಂಬ ನೆಪವೊಡ್ಡಿ ಕುಡಿಯುವವರು. ನಿನ್ನೆ ಮೊನ್ನೆ ಪರಿಚಿತನಾದ ಗೆಳೆಯನನ್ನೂ "ನೀನೇ ನನ್ನ ಆಜನ್ಮ ಬಂಧು, ನನ್ನ ಪ್ರಾಣಸ್ನೇಹಿತ" ಎಂದು ಗದ್ಗದಿತ ಕಂಠದಿಂದೊಂದಿಗೆ ಉದ್ಗರಿಸುತ್ತಾರವರು. ಗೆಳೆತನದ, ಪ್ರೀತಿಯ "ಅಮಲಿನಲ್ಲಿ" ಭಾವಪರವಶರಾಗಿ ನಿಮ್ಮನ್ನು ತಬ್ಬಿಕೊಳ್ಳುತ್ತಾರೆ, ಅಳುತ್ತಾರೆ. ಆದರೆ ಅವರ ಅಳುವಿನ ಕಣ್ಣೀರು ಕಣ್ಣಿನಿಂದ ಹೆಚ್ಚಾಗಿ ಮೂಗಿನಿಂದ ಇಳಿದು ಭುಜವನ್ನೆಲ್ಲಾ ತೋಯುವುದು ಜಾಸ್ತಿ. ಇದರಿಂದಾಗಿ ಗುಂಡು, ಸಿಗರೇಟಿನ ಹೊಗೆ, ಮೂಗಿನಿಂದಿಳಿದ ಅಂಟು ಕಣ್ಣೀರೆಲ್ಲಾ ಸೇರಿ ಸಹಿಸಲಾರದಂತಹಾ "ಸುವಾಸನೆ"ಯನ್ನು ನಿಮ್ಮ ಭುಜ ಹೊರಸೂಸುತ್ತದೆ. ಅದನ್ನಾಘ್ರಾಣಿಸುವ ಸೌಭಾಗ್ಯ ಕೂಡಿ ಬಂದಿತ್ತೊಮ್ಮೆ ನನಗೆ. ಅದಾದ ಮೇಲೆ ಈ ಅತಿ ಭಾವುಕರಾಗುವ "ಕುಡಿ"ಗಳಿಂದ ಕೊಂಚ ದೂರವೇ ಕುಳಿತುಕೊಳ್ಳುತ್ತೇನೆ. "ಲವ್ ಫೇಲ್ಯೂರ್" ಆದ ಗೆಳೆಯರನ್ನು ಕುಡಿದಾದ ಮೇಲೆ ನಿರ್ಜನ ಪ್ರದೇಶಕ್ಕೆ ಅಥವಾ ನಮ್ಮ ಕರಾವಳಿಯಲ್ಲಾದರೆ ಕಡಲ ತೀರಕ್ಕೆ ಕರೆದೊಯ್ಯಬೇಕೆನ್ನುವುದು ನನ್ನ ಅನುಭವದ ನುಡಿ. ಕುಡಿದಾದ ಮೇಲೆ ಅವರು ತಮ್ಮ ಇನ್ನಲ್ಲದ ಪ್ರೇಯಸಿಯನ್ನೊಮ್ಮೆ ನೆನೆದು ಮನಬಿಚ್ಚಿ ಭೀಕರವಾಗಿ ಗೋಳೋ ಎಂದು ರೋಧಿಸುತ್ತಾರೆ. ಅವರ ಆರ್ತನಾದ ನೋಡುಗರಿಗೆ ಅಸಹ್ಯವಾಗಿ ಕಂಡರೂ ಗೆಳೆಯರಾದ ನಮಗೆ (ಕುಡಿಯದಿದ್ದರೂ!) ನೋಡಿ ಕರುಳೇ ಕಿತ್ತು ಬರುತ್ತದೆ. ಹುಡುಗಿ ಕೈಕೊಟ್ಟ ಮೇಲೂ ಅವರು ಹಾಡುವ ಹಾಡು "ಅನಿಸುತಿದೆ ಯಾಕೋ ಇಂದು... ನೀನೇನೆ ನನ್ನವಳೆಂದು... ಎಂದೂ... ಎಂದೆಂದೂ..." ಅಥವಾ ಕಿಶೋರ್‌ ದಾ ಅವರ "ಹಮ್ ಬೇವಫಾ ಹರ್‌ಗಿಝ್ ನ ಥೇ... " ಎಂದು.


ಕುಡಿತದ ಅಮಲು ಕೆಲವರನ್ನು ಕೆರಳಿದ ವ್ಯಾಘ್ರವನ್ನಾಗಿಸಿ ಹೂಂಕರಿಸುವಂತೆ ಮಾಡುತ್ತದೆ. ಈ ಅವತಾರ ಪಡೆಯುವವರು ಹೆಚ್ಚಾಗಿ ಕೃಶಕಾಯದ ವ್ಯಕ್ತಿಗಳೆನ್ನುವುದೊಂದು ಸ್ವಾರಸ್ಯ. ತಿಂಗಳುಗಳ ಹಿಂದೆ ಯಾರೋ ಏನೋ ಹೇಳಿದ್ದು ಹಠಾತ್ತಾಗಿ ನೆನಪಿಗೆ ಬಂದು ನಖಶಿಖಾಂತ ಕೆಂಡಮಂಡಲವಾಗುತ್ತಾರವರು. ಒಮ್ಮೆಲೆ ಎದ್ದೇಳಿ, ಈಗಲೇ ಹೋಗಿ ಕೊಚ್ಚಿ ಕೊಲ್ಲುವ ಮಾತನ್ನಾಡುತ್ತಾರೆ. ಜೊತೆಗೆ ಕುಳಿತವರಲ್ಲಾದರೂ ಎನೋ ಅಂದಿದ್ದರೆ ಸುಖಾಸುಮ್ಮನೆ ಅವರೊಂದಿಗೆ ಜಗಳಿಕ್ಕಿಳಿಯುತ್ತಾರೆ. "ತಾಗ್ತಿಯೇನೋ, ನಂಗೆ ತಾಗ್ತಿಯೇನೋ, ಹುಷಾರ್" ಎಂದೆಲ್ಲಾ ಎದೆಯೊಡ್ಡುತ್ತಾ ರೊಚ್ಚಿಗೇಳುತ್ತಾರೆ. ನೆಟ್ಟಗಿದ್ದಲ್ಲಿ ಕರೆದರೂ ಬಾರದವರು ಗುಂಡು ಒಳಸೇರಿದ ಮೇಲೆ ತನ್ನ ನೆಚ್ಚಿನ ಗೆಳೆಯನ ಶತ್ರುಗಳೊಂದಿಗೆ "ಗ್ಯಾಂಗ್ ವಾರ್"ಗೆ ಹೋಗುವ ತವಕವನ್ನು ವ್ಯಕ್ತಪಡಿಸುತ್ತಾರೆ. "ನೋ ಪ್ರಾಬ್ಲಮ್... ಎಲ್ಲಾ ನನ್ಮೇಲೆ ಬಿಟ್ಬಿಡು" ಎನ್ನುತ್ತಾ ಗೆಳೆಯರ ಭರವಸೆಯ ಆಶಾಕಿರಣವಾಗಿ ಪ್ರಜ್ವಲಿಸುತ್ತಾರೆ. ಬಾರ್, ಪಾರ್ಟಿ, ಅಥವಾ "ದೊಂಪ"(ಮದುವೆಯ ಮುಂಚಿನ ರಾತ್ರಿ ಮಧುಮಗ ಕೊಡುವ ಬ್ಯಾಚುಲರ್ ಪಾರ್ಟಿ)ದಲ್ಲೆಲ್ಲಾ ಹೆಚ್ಚಾಗಿ ಇಂತಹಾ "ಕುಡಿ"ಗಳಿಂದಲೇ ಅವಾಂತರಗಳುಂಟಾಗುವುದು. ಸ್ತ್ರೀ ಶೋಷಣೆ, ಮಕ್ಕಳ ಶೋಷಣೆಗಳಂತಹಾ ಪ್ರಕರಣಗಳ ವೃದ್ಧಿಯಲ್ಲೂ ಇವರು ಕೊಡುಗೈ ದಾನಿಗಳು. ಇವರ ರೌದ್ರಾವತಾರ ನೋಡಿದಾಗಲೆಲ್ಲಾ ಮನದಲ್ಲಿ, "ಒನ್ ಮ್ಯಾನ್ ಆರ್ಮಿ"ಯಂತೆ ನಟಿಸುವ ಇವರನ್ನೇ ನೆರೆಕೆರೆಯ ದೇಶಗಳ ಮೇಲೆ ಛೂ ಬಿಟ್ಟು ಗಡಿ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಮೂಡುತ್ತದೆ. ಗಡಿ ಮುಟ್ಟುವವರೆಗೂ ಅವರ "ರೌದ್ರಾವಸ್ಥೆ"ಯನ್ನು ಕಾಪಾಡಲು ಬೇಕಾದ ಮಧ್ಯಕ್ಕೆ ಜೇಬಿನಲ್ಲಿ ಕಾಸಿಲ್ಲದ ಕಾರಣ ಈ "ಅಜೆಂಡಾ" ಕೈಬಿಡಬೇಕಾಗಿ ಬಂದು ನಿರಾಶೆಯಾಗುತ್ತದೆ. ಇದು "ರದ್ರ ಕುಡಿ"ಗಳೆಂಬ ವರ್ಗದ ಕತೆ.'


ಇನ್ನು ಕೆಲವರು "ವಿಚಿತ್ರ ಕುಡಿ"ಗಳು. ಇವರು "ಒಳಗೆ ಸೇರಿದರೆ ಗುಂಡು, ಹುಡುಗನಾಗುವನು _ _ _ _ _ _". ಆ ಬಿಟ್ಟ ಸ್ಥಳವನ್ನು ಅವರು ಕುಡಿದಾದ ನಂತರವೇ ತುಂಬಬೇಕು. ಏಕೆಂದರೆ ಇಂತಹಾ "ಕುಡಿ"ಗಳು ಗುಂಡು ಒಳಸೇರಿದ ನಂತರ ಯಾವ ರೂಪ ತಾಳುತ್ತಾರೆಂದು ನಿಖರವಾಗಿ ಹೇಳಲಾಗದು. "ಕುಡಿ"ಗಳು ಸಿಟ್ಟಾಗುತ್ತಾರೆ, ಅಳುತ್ತಾರೆ, ಕೆಲವೊಮ್ಮೆ ಊಹೆಗೂ ನಿಲುಕದ ವಿಚಿತ್ರ ಹಾವಭಾವಗಳ ಪ್ರದರ್ಶನ ನೀಡಿ ಮನಸ್ಸಿಗೆ ಮುದ ನೀಡುತ್ತಾರೆ!. ಕೆಲವರು ನನಗೆ ಅದು ಬೇಕು, ನನಗೆ ಇದು ಬೇಕೆಂದು ಸಣ್ಣ ಮಗುವಿನಂತೆ ಹಠ ಮಾಡುತ್ತಾರೆ. ಹೊಸ ಕೆಲಸ ಪಡೆದು ಹೋಗುತ್ತಿದ್ದ ಸಹೋದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಗೆಳೆಯನೊಬ್ಬ ಒಮ್ಮೆಲೆದ್ದು "ಈಗ ನಮ್ಮ ಗೆಳೆಯನ ಬಗ್ಗೆ ಎಲ್ಲರೂ ಐದೈದು ನಿಮಿಷ ಮಾತನಾಡಬೇಕು" ಎಂದು ಹೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಂಡಿದ್ದರು. ಒಬ್ಬ ಮನುಷ್ಯನ ಮಾನವನ್ನು ಹೇಗೆ ಐದೇ ನಿಮಿಷದಲ್ಲಿ ಹರಾಜು ಮಾಡಬೇಕೆಂಬ ಪ್ರಾತ್ಯಕ್ಷಿಕೆಗೆ ಮೂಕ ಸಾಕ್ಷಿಯಾಗಿದ್ದೆ ಅಂದು ನಾನು. ಕಳಸದ "ಅಂಬ ತೀರ್ಥ"ಕ್ಕೊಮ್ಮೆ ಚಾರಣಕ್ಕೆ ಹೋಗಿದ್ದಾಗ ಗೆಳೆಯನೊಬ್ಬ ನದಿಯಾಚೆ ತನ್ನ "ಮೊಬೈಲ್" ಬಿಟ್ಟು ಬಂದಿದ್ದೇನೆಂದು ನೆನಪಿಸಿಕೊಂಡಾಗ ನಮ್ಮಲ್ಲಿದ್ದ ಪಾನಮತ್ತ ಗೆಳೆಯನೊಳಗೆ "ಲಾಲ್ ಬಹಾದೂರ್ ಶಾಸ್ತ್ರಿ"ಯವರ ಪರಾಕ್ರಮ ತುಂಬಿ ಬರಲು ತುಂಬಿ ಹರಿಯುತ್ತಿದ್ದ ನದಿಯನ್ನೇ ದಾಟಲು ಹೊರಟು "ಬಾಲ್ ಬಾಲ್ ಬಚ್ ಗಯೇ" ಎನ್ನುವ ರೀತಿಯಲ್ಲಿ ಜೀವವುಳಿಸಿಕೊಂಡ ಘಟನೆ ನೆನೆಸಿದಾಗಲೆಲ್ಲಾ ಈಗಲೂ ಮೈ ರೋಮಗಳು ನೆಟ್ಟಗಾಗುತ್ತವೆ. ಕುಡಿದಿದ್ದ ದಡಿಯ ಗೆಳೆಯನೊಬ್ಬ ವಿಚಿತ್ರ ಭಂಗಿಯಲ್ಲಿ ಕೂರಲು ಹೋಗಿ ಗಟ್ಟಿಮುಟ್ಟೆಂದು ಹೆಸರುವಾಸಿಯಾಗಿದ್ದ "ನೀಲ್ ಕಮಲ್" ಕುರ್ಚಿಯ ಕಾಲೊಂದನ್ನು ತುಂಡರಿಸಿ ಅಂಗಡಿಯವನಿಗೆ ದಂಡ ಪಾವತಿಸಿದ್ದನಲ್ಲದೇ ತುಂಡಾಗಿದ್ದ ಆ ಕುರ್ಚಿಯನ್ನು ತನ್ನ ಬೈಕಿಗೆ ಕಟ್ಟಿ ಮನೆಗೆ ಕೊಂಡೊಯ್ಯಲು ಆಣಿಯಾಗಿದ್ದ. ಕೇಳಿದರೆ "ಇದು ನನ್ದು ಕುರ್ಚಿ... ಐ ಪೇಡ್ ಫಾರ್ ದಿಸ್" ಎಂದಿದ್ದ. "ಎಸ್! ಅವನು ಹೇಳುವುದರಲ್ಲಿ ತಪ್ಪೇನಿದೆ" ಎಂಬುದು ಇನ್ನೊಬ್ಬ ಗೆಳೆಯನ ವಾದ.


ನಾನು ನೋಡಿರುವ "ಕುಡಿ"ವರ್ಯರಲ್ಲಿ ಕೊನೆಯ ಹಾಗೂ ನನ್ನ ಅಚ್ಚುಮೆಚ್ಚಿನ ಕುಡಿಗಳೆಂದರೆ "ಹಾಸ್ಯ ಕುಡಿ"ಗಳು. ಕುಡಿದ ಅಮಲಿನಲ್ಲಿ ಇವರಾಡುವ ಮಾತುಗಳು ಇವರ ಏಕ ಪಾತ್ರಾಭಿನಯದ ತುಣುಕುಗಳು ಸಿನಿಮಾ ಹಾಸ್ಯನಟರ ನಟನೆಯನ್ನೂ ಮೀರಿಸುವಂತದ್ದು. ಯಾವ ಗಂಭೀರ ವಿಷಯವನ್ನೂ ನಗೆಪಾಟಲನ್ನಾಗಿಸುವ ಕಲೆಯಲ್ಲಿ ಪಾರಂಗತರಿವರು. ಇವರೊಂದಿಗಿನ ಅನುಭವದ ಕೆಲವೇ ತುಣುಕುಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.


ನನ್ನ ಗೆಳೆಯನೊಬ್ಬನಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಬಯಕೆ. ಅದಕ್ಕವನು ನೀಡುವ ಸ್ಪಷ್ಟನೆ "ನನ್ಗೆ ಪಾಕಿಸ್ತಾನೀ ಸಂಗೀತ ಅಂದ್ರೆ ತುಂಬಾ ಇಷ್ಟ, ಪಾಕಿಸ್ತಾನೀ ಗಾಯಕ ಆತಿಫ್ ಅಸ್ಲಂ ಇಷ್ಟ. ಸ್ಟ್ರಿಂಗ್ಸ್, ಜುನೂನ್, ರೇತ್ ಎಲ್ಲಾ ಪಾಕಿಸ್ತಾನೀ ಬ್ಯಾಂಡ್‌ ಸಂಗೀತ ಅಂದ್ರೆ ತುಂಬಾ ಇಷ್ಟ"!!. "ಮಧ್ಯ" ಕಟ್ಟಿ ಕೊಟ್ಟಿದ್ದ ಕಪ್ಪು ಪ್ಲಾಸ್ಟಿಕ್ ಚೀಲ ಗೆಳೆಯನೊಬ್ಬನ ಕಣ್ಣಲ್ಲಿ ನನ್ನ "ಬುರ್ಖಾ" ಆಗಿತ್ತು. "ಛೆ!... ಏನ್ ಕ್ರಿಯೇಟಿವಿಟಿ ನಿಂದು ಮಚ್ಚೀ..." ನಾನೆಂದಾಗ ಖುಷಿಯಿಂದ ನನ್ನ ತಬ್ಬಿಕೊಳ್ಳಲು ಮುಂದಾಗಿದ್ದ! ಪರಿಚಯಸ್ಥ ಹುಡುಗಿಯೊಬ್ಬಳು ಅಪಘಾತದಲ್ಲಿ ಮೃತಳಾದಳೆಂದು "ಭಾವುಕ ಕುಡಿ" ಅಳುತ್ತಿದ್ದರೆ. "ಛೆ ನೋಡೋಕೆ ತುಂಬಾ ಚೆನ್ನಾಗಿದ್ಲು" ಎಂದು ಈ ಗೆಳೆಯನ ಗೋಳು. ದೂರದರ್ಶನದಲ್ಲಿ ಸಿಖ್ಖರ "ಗುರುದ್ವಾರ"ದ ಚಿತ್ರಗಳು ಮೂಡಿಬರುತ್ತಿದ್ದಾಗ ಗೆಳೆಯ ತನ್ನ ಹೊರಳದ ನಾಲಗೆಯಿಂದ ಉಚ್ಚರಿಸಿದ ಹೆಸರಂತೂ ತೀರಾ ಅಸಹ್ಯವಾಗಿ ಕಂಡು ಟೀವಿ ಆಫ್ ಮಾಡಬೇಕಾಯಿತು ನಮಗೆಲ್ಲಾ. ("ರು" ಇದ್ದಲ್ಲಿ "" ಹಾಕಿ ನೀವೇ ಉಚ್ಚರಿಸಿಕೊಳ್ಳಿ. ಥೂ ಇವನಾ!). ಗೆಳೆಯನೊಬ್ಬನ ಮನೆಯಲ್ಲಿ ನಡೆದ "ಸುರಪಾನ"ದ ಸಂಭ್ರಮಯುತ ಪಾರ್ಟಿಯ ನಂತರ ಮಲಗಲೆಂದು ಹೋದ ಗೆಳೆಯ ಪಕ್ಕನೆ ಬಂದು ತಾನು ಹೊದ್ದುಕೊಂಡ ಚದ್ದರ ಮೈಗೆ ಸರಿಯಾಗಿ ಹೊಂದುತ್ತದೆಂದಾಗ ಆಶ್ಚರ್ಯವಾಗಿ ಕೋಣೆಯ ದೀಪ ಬೆಳಗಿಸಿ ನೋಡಿದ್ದೆವು ನಾವೆಲ್ಲಾ. ನೋಡಿದರೆ... ಅವನು ಹೊದ್ದುಕೊಂಡದ್ದು ಗೆಳೆಯನ ಅಮ್ಮನ "ನೈಟಿ"!!!!.


ಇಂತಹಾ ಹಲವಾರು ಬಗೆಯ "ಕುಡಿ"ಗಳೊಂದಿಗಿನ ಒಡನಾಟದ ಅನುಭವಗಳಿವೆ ನನ್ನಲ್ಲಿ. ಇದನ್ನೆಲ್ಲಾ ಓದಿ ನೀವು ನಕ್ಕಿದ್ದರೂ ಹೇಳುವ ಉದ್ದೇಶ ಅದಾಗಿರಲಿಲ್ಲ. ಇಂತಹಾ ವ್ಯಕ್ತಿಗಳು ಸಾರ್ವಕಾಲಿಕ ಪೋಲಿಗಳೇನಲ್ಲ. ಬ್ಯಾಂಕರ್, ಇಂಜಿನಿಯರ್, ಮ್ಯಾನೇಜರ್ ಎಂದೆಲ್ಲಾ ದೊಡ್ಡ ದೊಡ್ಡ ಘನತೆ ಗೌರವಯುತ ಹುದ್ದೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜವಾಬ್ದಾರಿಯುತ "ಪುಂಡರು" ಇವರು. ಗುಂಡಿನ ಗುಂಗಿಲ್ಲದಲ್ಲಿ ಈ ವ್ಯಕ್ತಿಗಳಿಂದ ಇಂತಹಾ ನಡತೆಯನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಅವರ ಈ ಬೇಜವಾಬ್ದಾರಿಯುತ ನಡತೆಗೆ "ಮಧ್ಯ"ವೇ ಮೂಲ ಕಾರಣವೆನ್ನಲು ನನ್ನನ್ಯಾರೂ ಅಡ್ಡಿಪಡಿಸಲಾರರು. ಎಷ್ಟು ಸಭ್ಯ ಬಟ್ಟೆ ಹಾಕಿ ಮಧ್ಯ ಕೊಟ್ಟರೂ ಮತ್ತೇರಿದ ನಂತರ ಯಾವ ಬಟ್ಟೆಯೂ ಸಭ್ಯವಾಗಿರಲಾರದು. ಅಂತದ್ರಲ್ಲಿ "ಆ ಬಟ್ಟೆ ಹಾಕಿ, ಈ ಬಟ್ಟೆ ಹಾಕಬೇಡಿ" ಎಂದು ಹೇಳುತ್ತಿರುವ ಪೋಲೀಸ್ ಅಧಿಕಾರಿಗಳ ಹೇಳಿಕೆ ಒಂದು ರೀತಿ "ಮಕ್‌ಮಲ್ ಬಟ್ಟೆಯೊಳಗೆ ಚಪ್ಪಲಿಯಿಟ್ಟು ಹೊಡೆದಂತೆ". ಇಂತಹಾ "ಹಿತವಚನಗಳ" ಬಗ್ಗೆ ನಗದೇ ಇನ್ನೇನು ಮಾಡಲಿ.


ಮಧ್ಯ ದೊರೆ"ಗಳನ್ನೇ ರಾಜ್ಯಸಭೆ, ಲೋಕಸಭೆಗಳಿಗೆ ಕರೆಸಿಕೊಂಡು ಆಳುತ್ತಿರುವ ಸಭ್ಯ ರಾಜಕಾರಿಣಿಗಳ ಈ ಯುಗದಲ್ಲಿ ಮಧ್ಯ ಮುಕ್ತ ಸಮಾಜದ ಕನಸು ಮರೀಚಿಕೆಯಾಗಿದೆಯಾದರೂ ಹೆಣ್ಣನ್ನು ಅತಿ ಗೌರವದಿಂದ ಕಂಡ ಸಂಸ್ಕೃತಿಯ ಇತಿಹಾಸವಿರುವ ಈ ನಮ್ಮ ದೇಶದಲ್ಲಿ ಹೆಣ್ಣೊಂದು ಅರೆನಗ್ನ ಬಟ್ಟೆ ತೊಟ್ಟು ಇಂತಹಾ ಹೀನ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಭಟಿಸುವುದು, ಪ್ರತಿಭಟಿಸುತ್ತಿರುವವರಿಗೆ ಬೆಂಬಲ ನೀಡುವುದು ನಮ್ಮ ಕನಿಷ್ಟ ಕರ್ತವ್ಯವಾಗಿದೆ. "ಆ ಬಾರ್ ಗರ್ಲ್ ಇಂತಹಾ ಬಟ್ಟೆ ಯಾಕೆ ಉಡುತ್ತಿದ್ದಾಳೆ?" ಎಂದು ಪ್ರೆಶ್ನಿಸುವ ಬದಲು "ಮೊದಲು ಅವಳು ಅಲ್ಲಿ ಯಾಕಿದ್ದಾಳೆ?" ಎಂದು ನಾವು, ನಮಗಿಂತ ಹೆಚ್ಚಾಗಿ ಆ ಅಧಿಕಾರಿಗಳು ಪ್ರಶ್ನಿಸಿಕೊಳ್ಳಬೇಕಾಗಿದೆ.



ಶಫಿ ಸಲಾಂ

ಬಹರೈನ್

ಪ್ರೀತಿ-ಬದುಕು

ಅದೆಷ್ಟು ನಿರಾಳವಾಗಿ ಹೇಳಿದೆ
ಬಾ ಓಡಿ ಹೋಗೋಣ
ಎಲ್ಲ ಸಂಬಂಧಗಳ ಬಿಟ್ಟು
ನಾವಿಬ್ಬರೇ ಬದುಕಿ ನೋಡೋಣ

ಪ್ರೀತಿಯೇ ಸರ್ವಸ್ವವೆಂಬ ಕನಸನು
ಕಣ್ಣಲಿಟ್ಟು ಹೊರಟು ಹೋಯಿತು
ನಮ್ಮ ಬಾಲ್ಯ
ಬದುಕಿಗೆ ಹೊಸ ದಿಕ್ಕನು
ಕೊಡುವ ಯೌವನದ ದಿನಗಳು
ಎಷ್ಟು ಅಮೂಲ್ಯ!

ಕಣ್ಣಂಚಲಿ ಕನಸುಗಳೇ ತುಂಬಿರುವಾಗ
ನಮ್ಮಿಬ್ಬರ ಭೇಟಿಯ ಆ ಕ್ಷಣ
ನವ ಒಲವಿನಾಂಕುರದ ರೋಮಾಂಚನ
ನಮ್ಮ ಪ್ರೀತಿ ಎಲ್ಲರಂತಲ್ಲ
ಕೈಬಿಡೆವು ನಾವೆಂದೂ
ಕೊಟ್ಟೆವು ಒಬ್ಬರಿಗೊಬ್ಬರು ವಚನ

ಹೆತ್ತು ಸಾಕಿದ ತಾಯಿ ತಂದೆ
ಕುಟುಂಬ, ಬಂಧು ಬಳಗ
ಯಾರಿಗೆ ಬೇಕೀ ರಗಳೆ
ತನ್ನ ಹಿತಾಸಕ್ತಿ ನೀಗಿಸಲು
ಮಾನವ ನಿರ್ಮಿಸಿದ
ಈ ಸಮಾಜವೆಂಬ ಕಟ್ಟಳೆ

ಆದರೆ ಪ್ರಿಯತಮ!
ಈ ಬದುಕಿನಲಿ, ನಿನ್ನ
ಪ್ರೀತಿಯೊಂದಿದ್ದರೆ ಸಾಕೇ?
ಬೆಟ್ಟ ಗುಡ್ಡಗಳ ತಪ್ಪಲಲ್ಲಿ
ಬರೇ ಮುತ್ತಿಕ್ಕುತ ಕುಣಿಯಲು
ಬದುಕೊಂದು ಸಿನಿಮಾದ ಹಾಡೇ?

ಪತಿಯ ಮನೆ, ತವರೂರ ಪ್ರೀತಿ
ಹಿರಿಯರ ಆಶಿರ್ವಾದ
ನಿಶ್ಚಿತಾರ್ಥ, ಮದುವೆ, ಸೀಮಂತ
ಇವೆಲ್ಲದರ ಪರಿವಿಲ್ಲದೇ
ದೂರದೂರಿಗೆ ಕೂಡಿ ಓಡಿ
ಬದುಕಿದರೆ ಮೆಚ್ಚುವನೆ ಭಗವಂತ?
-ಶಫಿ

Saturday, June 5, 2010

ದಾನ

ಧನ ಕನಗಳ ಧಾರೆಯೆರೆಯುವುದೊಂದೇ
ದಾನವಲ್ಲವಯ್ಯ
ದಾನದಿ ವಿಧಗಳು ಹಲವಾರು

ಅನಾಥನ ತಲೆ ನೇವರಿಸಿ
ಪ್ರೀತಿಯಿಂದೆರಡು ಮಾತನ್ನಾಡುವುದು
ವಾತ್ಸಲ್ಯ ದಾನ

ತಾನೆದ್ದು ನಿಂತು
ಹಿರಿಯರ ಕುಳ್ಳಿರಿಸುವುದು
ಗೌರವ ದಾನ

ಸಖಿಯೆಡೆಗೆ ಮುಗುಳ್ನಕ್ಕು
ಪ್ರೀತಿಯ ನೋಟವ ಬೀರುವುದು
ಒಲವ ದಾನ

ನೊಂದ ಗೆಳೆಯನ
ದುಃಖವನ್ನಾಲಿಸುವುದು
ಸಮಯ ದಾನ

ಬಾಡಿದ ಗಿಡದಡಿಗೆ
ಶೀತಲ ಜಲವನ್ನೀಯುವುದು
ಜೀವ ದಾನ

ಅರಿವಿಲ್ಲದೆ ತಪ್ಪೆಸಗಿದಾಳಿಗೆ
ಬಯ್ಯದಿರುವುದು
ತಾಳ್ಮೆಯ ದಾನ

ಹೊಸ ಸಹೋದ್ಯೋಗಿಯ
ವೃತ್ತಿಯ ಕಲಿಸುವುದು
ಯುಕ್ತಿ ದಾನ

ನೀಡುವ ಹುರುಪಿದ್ದಲ್ಲಿ
ಭಾವನೆಗಳ ಅರ್ಥ ತಿಳಿದಲ್ಲಿ
ಲೋಕವೆಲ್ಲ ದಾನಮಯ
-ಶಫಿ ಸಲಾಂ

Saturday, May 29, 2010

ಸಚ್ ಏ ಹೈ


"ನನಗೆ ಕೆಲವೊಮ್ಮೆ ಮೂಡ್ ಔಟ್ ಆಗುದುಂಟ್ರೀ, ಕೆಲಸ, ಊಟ-ತಿಂಡಿ ಏನೂ ಸೇರಲ್ಲ, ನಿದ್ರೇನು ಸರಿ ಬೀಳೊಲ್ಲ,.. ಇಷ್ಟೇ ಅಲ್ಲ ಯಾಹೂ ಮೆಸ್ಸೆಂಜರ್‌ನಲ್ಲಿ ದಿನಾ ಒಂದೆರಡು ಗಂಟೆ ಮನೆಯವರೊಡನೆ ಮಾತನಾಡುವವನಿಗೆ ಕೆಲವೊಮ್ಮೆ ಒಂದು ನಿಮಿಷ ಫೋನ್ ಮಾಡುವುದೂ ಬೇಡವೆಂದಾಗ್ತದೆ, ಯಾಕ್ರೀ ಹೀಗೆ? ನಾನು ಗಲ್ಫಲ್ಲಿ ಹೊಸ್ತಾಗಿ ಬಂದವನೇನೂ ಅಲ್ವಲ್ಲಾ... ಮತ್ಯಾಕೆ ಹೀಗೆ??" -ದೂರದ ಸಂಬಂಧಿಕನೊಬ್ಬ ಸಿಗರೇಟಿನ ದೊಡ್ಡದೊಂದು ಪಫ್ ಒಳಗೆಳೆದು ವೀಕೆಂಡ್ ರಾತ್ರಿ ರೂಮಿನ ಟೆರೇಸ್ ಮೇಲೆ ನನ್ನಲ್ಲಿ ಕೇಳಿದ್ದ. ಅವನು ಮಾತನಾಡುತ್ತಿದ್ದಂತೆ ಒಳಗಿದ್ದ ಹೊಗೆ ಸಿಗ್ನಲ್ಲಿನಲ್ಲಿ ಆಫ್ ಮಾಡದೇ ನಿಂತ ಬೈಕಿನ ಸೈಲೆಂಸರ್‌ನಿಂದ ಬರುವಂತೆ ಮೆಲ್ಲ ಮೆಲ್ಲಗೆ ಹೊರ ಬರುತ್ತಿತ್ತು. "ನಿಮಗೆ ಡಿಪ್ರೆಶ್ಶನ್ ಪ್ರಾಬ್ಲಮ್ ಇದೇರೀ" -ಎಲ್ಲಾದರೂ ಹೇಳಿಬಿಟ್ಟರೆ ಅವನ ನಿದ್ರೆ ಎಲ್ಲಾ ಹೋಗಿ ಪ್ರಾಬ್ಲಮ್ ಇನ್ನೂ ಹೆಚ್ಚಾಗಬಹುದೆಂಬ ಭಯದಿಂದ "ಏನಿಲ್ಲಾರೀ... ನಂಗೂ ಕೆಲವೊಮ್ಮೆ ಹೀಗಾಗತ್ತೆ... ತಿಂಗಳುಕಟ್ಲೆ ಮನೆ ಬಿಟ್ಟು ದೂರ ಇರೋ ನಮ್ಗೆ ಅದೆಲ್ಲಾ ಮಾಮೂಲ್ರೀ... ಡೊಂಟ್ ವರೀ" ಎಂದು ಅವರನ್ನು ಸಮಜಾಯಿಷಿದ್ದೆ.
ನಿಜ ಹೇಳುವುದಾದರೆ ನನಗೂ ಕೆಲವೊಮ್ಮೆ ಈ ಮನಸ್ಥಿತಿ ಬರುವುದುಂಟು. ಅದು "ಡಿಪ್ರೆಶ್ಶನ್" ಅಂತಲೇ ಹೇಳುವಷ್ಟು ಗಂಭೀರವೇನೂ ಅಲ್ಲ. ಆದರೂ "ಆಗಿರಬಹುದಾದ" ಈ ಡಿಪ್ರೆಶ್ಶನ್ನಿಂದ ಹೊರಬರಲು ಅನೇಕ ಮಾರ್ಗಗಳನ್ನು ಉಪಯೋಗಿಸುತ್ತೇನೆ. ಊರಿನ ಗೆಳೆಯರಿಗೆ ಫೋನಾಯಿಸುವುದು, "ಜಿಮ್" ಹೋಗಿ ದೇಹವನ್ನೊಂದಷ್ಟು ಪೀಡಿಸಿಕೊಳ್ಳುವುದು, ಆಧ್ಯಾತ್ಮದಲ್ಲಿ ಹೆಚ್ಚು ಮಗ್ನನಾಗುವುದು, ಗಝಲ್ ಗಳ ಮೊರೆ ಹೋಗುವುದು. ಏನೂ ಇಫೆಕ್ಟ್ ಆಗದಿದ್ದಾಗ ಒಂದೆರಡು ಸಿಗ್ರೇಟೇ ಗತಿ... ಇವು ನನ್ನ ಮೇರೆಗಳು. ಇನ್ನು ಕೆಲವರು ತೀರಾ ಕೆಟ್ಟ ಮಾರ್ಗಗಳನ್ನು ಬಳಸುತ್ತಾರೆ. ಅದನ್ನಿಲ್ಲಿ ಹೆಸರಿಸುವ ಅಗತ್ಯವಿಲ್ಲ ಬಿಡಿ.
"ಅರೆ! ಮೂಡ್ ಔಟ್ ಆಗದೇ ತುಂಬಾ ದಿನ ಆಯ್ತಲ್ಲಾ" ಎಂದು ಮೊನ್ನೆ ಯೋಚಿಸುತ್ತಿರುವಾಗಲೇ ಪರಿಚಯದ ಹುಡುಗಿಯೊಬ್ಬಳು "ಹೇ ಶಫಿ.. ವಾಟ್ಸಪ್ ಮ್ಯಾನ್? ನೋ ನಿವ್‌ಸ್..." ಎಂದು ಆನ್‌ಲೈನ್ ಮೆಸೇಜ್ ಕಳಿಸಿಬಿಟ್ಟಳು. ಅದಕ್ಕುತ್ತರವಾಗಿ ಏನು ಬರೆಯುವುದೆಂದೇ ತೋಚದೆ "ಹೇಳುವಂತದ್ದೇನೂ ಇಲ್ಲ... ಅದೇ ಕೆಲಸ, ಅದೇ ಆಫೀಸು, ಅದೇ ಆಫೀಸಿಸ ಒರಟು ಜನರು, ಅದೇ ರೂಮು, ಅದೇ ಹೋಟೆಲು, ಅದೇ ಮೆಸ್, ಏಕಾಂಗಿ ಬದುಕು..." -ಸ್ವಲ್ಪ ಒರಟೊರಟಾಗಿಯೇ ಬರೆದುಬಿಟ್ಟೆ. ಆದರೂ ಅವಳು ಮಾತು ಮುಂದುವರಿಸಿ ಊರಿನಲ್ಲಾಗುತ್ತಿರುವ ಎಲ್ಲಾ ಆಗುಹೋಗುಗಳನ್ನು ಒಂದು "ಹುಡುಗಿ" ಕಂಡಂತೆ ವಿವರಿಸುತ್ತಾ ಹೋದಳು " ಯು ನೋ.. ಅವರು ಮದುವೆಯಾಗ್ಬಿಟ್ರು ಕಣೋ.. ಕೊನೆಗೂ... ಅಪ್ಪ ಅಮ್ಮ ಬೇಡವೆಂದರೂ ಕೇಳಲಿಲ್ಲ... ಮೊನ್ನೆ ಮಳೆ ಬಂದಿತ್ತು... ನನಗೆ ಈಗ ಶೀತ ಆದಂತಿದೆ... etc etc... ಹೃತಿಕ್ ರೋಷನ್ "ಕೈಟ್ಸ್" ನೋಡ್ಲಿಕ್ಕೆ ಪ್ಲಾನ್ ಮಾಡ್ತಾ ಇದ್ದೀವಿ... ಯು ಆರ್ ವೆಲ್ಕಮ್ ಟೂ..." -ಮದುವೆಯಾದರೆ, ಮಳೆಯಾದರೆ ನನಗೇನಪ್ಪಾ? ಮತ್ತೆ ಅವಳೀ ಔಪಚಾರಿಕ ಆಮಂತ್ರಣಕ್ಕೆ ಓಗೊಟ್ಟು ಹೋಗೋಣವೆಂದು ಒಮ್ಮೆ ಯೋಚಿಸಿದೆ. ಅದರೆ ನೂರಿನ್ನೂರು ರುಪಾಯಿ ಕೊಟ್ಟು ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ನೋಡಲು ಸಾವಿರಾರು ಖರ್ಚು ಮಾಡಿ ಊರಿಗೆ ಹೋಗುವುದು ಅಚಾತುರ್ಯದ ಕೆಲಸದಂತೆ ಕಂಡು... "ಓಹ್ ಥ್ಯಾಂಕ್ ಯೂ" ಎಂದಷ್ಟೇ ಬರೆದು ಎಂಟರ್ ಒತ್ತಿದೆ. ಒಂದು ಕಣ್ಣು ಮಿಟುಕಿಸುವ ಸ್ಮೈಲಿಯೊಂದನ್ನು ನನಗೆ ಕೊಟ್ಟು ಅವಳು ವಿದಾಯ ಹೇಳಿದಳು. ಇಷ್ಟಾದ ನಂತರ ನನ್ನ "ಮೂಡ್" ನನ್ನೊಂದಿಗೆ ಆಟವಾಡತೊಡಗಿತು. ಮನಸ್ಸಿನ ತುಮುಲಗಳೆಲ್ಲ ಒಮ್ಮೆಲೆ ಎದ್ದು ನನ್ನನ್ನು ಕಾಡತೊಡಗಿದವು. ಯಾರಾದರೂ "ವಾಟ್ಸಪ್" ಹೇಳಿದರೆ ಉತ್ತರಿಸಲಾಗದಷ್ಟು ನೀರಸವಾಗಿಬಿಟ್ಟಿತೇ ಬದುಕು? ಮುಂಚಿದ್ದ ಉಲ್ಲಾಸ, ಸಂತೋಷಗಳೆಲ್ಲ ಎಲ್ಲಿ ಮಾಯವಾಗಿವೆ? ಈ ನೀರವತೆಗೆ ಏನು ಮದ್ದು ಮಾಡುವುದು? ದಿನವಿಡೀ ಇದೇ ರಾಗ...
ಆಫೀಸ್ ಮುಗಿಸಿ ರೂಮಿಗೆ ಹೋದವನೇ ಮನೆಗೆ ಕರೆ ಮಾಡಲು ಕಂಪ್ಯೂಟರ್ ಆನ್ ಮಾಡಿದೆ. ಆದರೂ ಯಾಕೋ ಮನಸ್ಸೇ ಬರಲಿಲ್ಲ. ಆರ್ಕುಟ್‌ನಲ್ಲಿ ಅಪ್‌ಲೋಡ್ ಆಗಿದ್ದ, ಊಟಿ, ಗೋವಾ, ಇನ್ನೆಲ್ಲೆಲ್ಲೋ ಸುತ್ತಲು ಹೋಗಿದ್ದ, ಹಬ್ಬ-ಮದುವೆಗಳಿಗೆ ಊರಿಗೆ ಹೋಗಿದ್ದ ಗೆಳೆಯರ ನಗುಮುಖದ ಫೋಟೋಗಳು ನನ್ನನ್ನೇ ನೋಡಿ ಗೇಲಿ ಮಾಡಿದಂತಿದ್ದವು. "ಫೇಸ್‌ಬುಕ್" ನೋಡಿದರೆ ಅದೇ ಹಳೆಯ ಫಾರ್ಮ್‌ವಿಲ್ಲೆ ಸೇರಿ "ರೈತ"ನಾಗಲು, ಮಾಫಿಯಾ ವಾರ್ ಸೇರಿ "ಗೂಂಡಾ" ಆಗಲು ಗೆಳೆಯರ ಕೋರಿಕೆಗಳು. ಈ ಜನರು ಯಾವ ಕಾಲ್ಪನಿಕ ಲೋಕದಲ್ಲಿ ಜೀವಿಸುತ್ತಿದ್ದಾರೆ ಗೊತ್ತಿಲ್ಲ. "ಇದ್ಯಾವುದೂ ಬೇಡ. ಒಂದೆರಡು ಗೆಳೆಯರಿಗೆ ಕಾಲ್ ಮಾಡಿ ಸ್ವಲ್ಪ ಹರಟೆ ಹೊಡೆದರೆ ಸರಿಯಾಗಬಹುದೇನೋ" ಎಂದುಕೊಂಡು ನನ್ನ ಮೊದಲ ಲೈಫ್ ಲೈನ್ ಉಪಯೋಗಿಸಲು ಮುಂದಾದೆ. ಮುಂಚೆ ನನ್ನೊಂದಿಗೇ ಇದ್ದ ಗೆಳೆಯನೊಬ್ಬನಿಗೆ ಮೊದಲು ಕಾಲ್ ಮಾಡಿದೆ. ಆದರೆ ಅವನೂ ನನ್ನ "ಮೂಡ್" ಜೊತೆ ಸೇರಿ ನನ್ನನ್ನು ಇನ್ನಷ್ಟು ಖಿನ್ನನಾಗಿಸಿದ. "ಹೊಸ ಕೆಲಸ, ಹೊಸ ಜನರು, ಹೊಸ ಊರು, ಏರಿದ ಸಂಬಳ, ಪೊಸಿಶನ್, ಘನತೆ ಗೌರವ.. .ನೀನೇನು ಮಾಡುತ್ತಿದ್ದೀಯ ಅಲ್ಲಿ... ಈ ಕಡೆ ಬಾ..." ಹೀಗೆಲ್ಲಾ ಹೇಳಿ ನನ್ನ ಡಿಪ್ರೆಶ್ಶನ್ನೆಂಬ ತಿಳಿಸಾರಿಗೆ ಒಗ್ಗರಣೆ ಹಾಕಿ ಹೊಗೆಯೆಬ್ಬಿಸಿದ. ಒಮ್ಮೆ ಮನಸ್ಸು ಭಾರವಾದಂತೆ ಭಾಸವಾಗತೊಡಗಿದರೆ ಮಾಡಿದ ಯಾವ ಕೆಲಸವೂ ಸರಿಹಿಡಿಸುವುದಿಲ್ಲ. ಆಡಿದ ಎಲ್ಲಾ ಮಾತುಗಳು ನನಗೇ ಚುಚ್ಚಿದಂತೆ. ಇವೆಲ್ಲಾ ಸೇರಿ ನನ್ನ ಅರಿಷಡ್ವೈರಿಗಳೊಂದಿಗೆ ಒಪ್ಪಂದ ಮಾಡಿ ವ್ಯಕ್ತಿತ್ವವನ್ನೇ ಆವರಿಸಿಬಿಡುವ ಷಡ್ಯಂತ್ರ ರೂಪಿಸಿಕೊಂಡಂತೆ ಅನುಭವವಾಗುತ್ತದೆ.
"ಅಮ್ಮ ಫೋನಿಗೆ ಕಾಯ್ತಿರಬೇಕು... ಅವಳಿಗೊಮ್ಮೆ ಮಾತನಾಡಿಸಿ ಬಿಡುವ" -ಯೋಚಿಸುತ್ತಾ ಕಾಲ್ ಮಾಡಲು ಹೊರಟೆ. ಒಳಗೆ ರೂಮಿನಲ್ಲಿ ಬಾಗಿಲು ಮುಚ್ಚಿಕೊಂಡು ಈಗಷ್ಟೇ ಊರಿಂದ ವಾಪಾಸಾದ ರೂಮ್ಮೇಟ್ ಮೊಬೈಲ್ ಹಿಡಿದು ಹೆಂಡತಿಯೊಂದಿಗೆ ಮಾತಿನಲ್ಲಿ ನಿರತನಾಗಿದ್ದ. ಮರಾಠಿ ಭಾಷೆಯಲ್ಲಿ ಹೆಂಡತಿಯೇನಾದರೂ ಹಣ, ಒಡವೆ ಎಂದಾಕ್ಷಣ ಏರುದನಿಯಲ್ಲಿ, ಲವ್-ಯೂ, ಲೈಕ್ ಯು ಹೇಳಿದೊಡನೆ ಪಿಸುಮಾತಿನಲ್ಲಿ ಸಾಗುತ್ತಿತ್ತವನ ಸಲ್ಲಾಪ. ಜೊತೆಗೆ ಎದುರು ಫ್ಲಾಟ್‌ನಲ್ಲಿರುವ ಪಾಕಿಸ್ತಾನೀ ಕುಟುಂಬದ ಆ ಸಣ್ಣ ಮಗುವಿನ ನಿಲ್ಲದ ಪ್ರಲಾಪ. ರೂಮಿಂದ ಹೊರ ನಡೆದು ಪಬ್ಲಿಕ್ ಬೂತ್‌ನತ್ತ ಹೆಜ್ಜೆ ಹಾಕಿದೆ. ಕಾರ್ಡ್ ಉಪಯೋಗಿಸಿ ಕಾಲ್ ಮಾಡಿದರೆ ಈ ಬೂತ್‌ಗಳಲ್ಲಿ ಅತಿಹೆಚ್ಚು ಟಾಕ್‌ಟೈಮ್ ಸಿಗುತ್ತದೆ. ಆದರೆ ಅಲ್ಲಿ ಆಗಲೇ ಒಣಕಲು ದೇಹದ ಪುರುಷನೊಬ್ಬ ನಿಂತು ಫೋನಾಯಿಸುತ್ತಿದ್ದ. ತಾನುಟ್ಟ ಲುಂಗಿಯನ್ನು ಗಾಳಿಗೆ ಹಾರದಂತೆ ಮುದ್ದೆ ಮಾಡಿ ಕಾಲುಗಳ ಮಧ್ಯೆ ಒತ್ತಿಟ್ಟು ಬದಿಯ ಗೋಡೆಗೊರಗಿ ಆಂಧ್ರ ಭಾಷೆಯಲ್ಲೇನೋ ನಗುನಗುತ್ತಲೇ ಮಾತನಾಡುತ್ತಿದ್ದ. ಅವನ ನಗು, ಮಾತಿನ ಭಾವದಲ್ಲೊಂದು ಪ್ರಾಮಾಣಿಕತೆಯಿತ್ತು. ಬೇರೆ ಬೂತ್ ಹುಡುಕದೇ ಅಲ್ಲೇ ನಿಂತು ಅವನನ್ನು ನೋಡುತ್ತಾ ಕಣ್ಣಿನಿಂದಲೇ ಪ್ರಶ್ನಿಸಿದೆ... ಯಾರು ನೀನು? ಸಾಲದ ಹೊರೆ ಹೊರಲಾಗದೇ, ಆದರೂ ಆತ್ಮಹತ್ಯೆಗೆ ಶರಣಾಗದೇ ತನ್ನ ಬರಡು ಭೂಮಿಯನ್ನು ಮಾರಿ ಇಲ್ಲಿ ಬಂದಿರುವ ರೈತ? ಚಕ್ರಬಡ್ಡಿಯೆಂಬ ನೀತಿಯಿಂದ ಬಡವರ ರಕ್ತ ಹೀರುವ ಬ್ಯಾಂಕುಗಳ ಚಕ್ರವ್ಯೂಹಕ್ಕೆ ಸಿಲುಕಿ, ಮರುಪಾವತಿಸಲಾಗದೇ ಇಲ್ಲಿ ಬಂದು ದುಡಿಯುತ್ತಿರುವ ಜೀತದಾಳು? ತಂಗಿಯ ಮದುವೆಯ ಆಸೆಯಿಟ್ಟು ಈ ಮರುಭೂಮಿಯ ಸುಡುಬಿಸಿಲಿನಲ್ಲಿ ದುಡಿಯುತ್ತಿರುವ ಅಣ್ಣ? ಮಗನ ಭವಿಷ್ಯಕ್ಕೆ, ಅವನ ವಿದ್ಯಾಭ್ಯಾಸಕ್ಕೆಂದು ದುಡಿದು ಹಣ ಜಮಾಯಿಸುತ್ತಿರುವ ಅಪ್ಪ? ಯಾರಪ್ಪಾ ನೀನು?
"ಇವನ ಸಂಬಳಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಸಂಭಾವನೆ ಪಡೆಯುವವ ನಾನು. ಆದರೂ ನಾನೇಕೆ ಸಂತುಷ್ಟನಾಗಿಲ್ಲ? ನನಗೇಕೆ ಹೀಗೆ ಡಿಪ್ರೆಶ್ಶನ್, ತಿಕ್ಕಲು, ಮೂಡ್ ಔಟೆಂಬ ಸ್ವಕಲ್ಪಿತ ಕಾಯಿಲೆಗಳು? ಇವನಂತೆ ಸಾವಿರಾರು ಕಾರ್ಮಿಕರು ಅತಿ ಕಡಿಮೆ ಸಂಬಳಕ್ಕೆ ಇಲ್ಲಿ ಬಂದು ದುಡಿಯುತ್ತಿದ್ದಾರೆ. ಅವರ ಜೀವನವೂ ಸಾಗುತ್ತಿದೆ" -ಯೋಚಿಸುತ್ತಿದ್ದಂತೆ ದಿನದಲ್ಲಿ ನಡೆದುದನ್ನೆಲ್ಲಾ ಮೆಲುಕು ಹಾಕತೊಡಗಿದೆ. ಗೆಳೆಯನೊಬ್ಬ ಪ್ರೀತಿಸಿ, ಅವಳಿಗೆ ಕೈಕೊಡದೆ, ಕೊಟ್ಟ ವಚನ ಪಾಲಿಸಿ ಮನೆಯವರನ್ನು ಓಲೈಸಿ, ಸಮಾಜವನ್ನು ಎದುರಿಸಿ ಮದುವೆಯಾದದ್ದು ನಿಜವಾಗಿಯೂ ಸಂತೋಷದ ಸಂಗತಿಯಾಗಿತ್ತಲ್ಲ. ಸಮಯದಲ್ಲಿ ಮಳೆಯಾದರೆ ಊರಲ್ಲಿ ಬೆಸಾಯ ಚೆನ್ನಾಗಿ ನಡೆಯುತ್ತದೆ, ಜನರು ಸುಖವಾಗಿರಬಹುದೆಂದು ಖುಷಿಪಡಬಹುದಿತ್ತಲ್ಲ. ಸುತ್ತಾಟಕ್ಕೆ ಹೊರಡುವಾಗಲೆಲ್ಲಾ ಗೆಳೆಯರೆಲ್ಲಾ ನನ್ನನ್ನು ನೆನಪಿಸಿಕೊಳ್ಳುತ್ತಾರೆ, ಮಿಸ್ ಮಾಡುತ್ತಾರೆನ್ನುವುದೆಷ್ಟು ಆನಂದದ ವಿಷಯ. ನನ್ನದೇ ಡಿಗ್ರಿಯಿರುವ, ನನ್ನೊಂದಿಗೆ ಕೆಲಸದಲ್ಲಿದ್ದ, ನನ್ನಷ್ಟೇ ಅನುಭವವಿರುವ ಸಹೋದ್ಯೋಗಿಯೊಬ್ಬ ಉತ್ತಮ ಕೆಲಸ ಗಿಟ್ಟಿಸಿಕೊಂಡನೆಂದರೆ ನನಗೂ ಸ್ವಲ್ಪ ಪರಿಶ್ರಮ ಪಟ್ಟಲ್ಲಿ ಅಂತಹಾ ಕೆಲಸ ಸಿಗಬಹುದಲ್ಲ...". ಎದುರು ನಿಂತು ಮಾತನಾಡುತ್ತಿದ್ದವ ನನ್ನ ಕಡೆ ನೋಡಿ ಮುಗುಳ್ನಕ್ಕು "ನನಗಿನ್ನೂ ತುಂಬಾ ಮಾತನಾಡ್ಲಿಕ್ಕಿದೆ ಬೇರೆ ಬೂತ್ ಹುಡುಕಿ" ಎಂದು ಸನ್ನೆಯಲ್ಲೇ ಹೇಳಿದ. ನಾನೂ "ಪರವಾಗಿಲ್ಲ" ಎಂದು ಸನ್ನೆ ಮಾಡಿ ಅವನೆದುರೇ ನಿಂತು ಕಾದೆ.
ಹೌದು ಈ ಡಿಪ್ರೆಶ್ಶನ್, ಮೂಡ್ ಎಲ್ಲಾ ನಾವು ಸುತ್ತಮುತ್ತಲೂ ನೋಡುವ ರೀತಿ, ವಿಷಯಗಳನ್ನು ಸ್ವೀಕರಿಸುವ ಬಗೆಯ ಮೇಲೆ ಆಧರಿತವಾಗಿದೆ. ಒಂದು ವಿಷಯ ಅಥವಾ ಸುದ್ದಿಯಿಂದ ನಮಗೆ ಸಂತೋಷವಾಗಬಹುದು, ದುಃಖವಾಗಬಹುದು. ಸುಖ ದುಃಖಗಳು ಬದುಕಿನ ಅನಿವಾರ್ಯತೆಗಳು. ಆದರೆ ದುಃಖಿಯಾಗಿರುವುದು ನಮಗೆ ಅನಿವಾರ್ಯವಲ್ಲ. "ಕೇವಲ ಆಧ್ಯಾತ್ಮಿಕ ಮತ್ತು ಒಳಿತಿನ ವಿಷಯಗಳಲ್ಲಿ ನಮಗಿಂತ ಉನ್ನತ ಸ್ಥಾನದಲ್ಲಿರುವವರತ್ತ ನೋಡಬೇಕು, ಲೌಕಿಕ ವಿಷಯಗಳಲ್ಲಿ ನಮಗಿಂತ ಕೆಳಗಿದ್ದವರತ್ತ ನೋಡಬೇಕು ಆಗಲೇ ಸುಖವಾಗಿರಲು ಸಾಧ್ಯ" -ಬಾಲ್ಯದಲ್ಲಿ ಮದರಸಾದಲ್ಲಿ ಕಲಿತಿದ್ದ ಪಾಠವೊಂದು ನೆನಪಾಗಿ ಮನಸಲ್ಲೆಲ್ಲೋ ಆಶಾಭಾವದ ಹೂವೊಂದು ಅರಳಿದಂತೆ ಅನುಭೂತಿಯಾಯಿತು. ಸಿಗ್ರೇಟಿನ ಲೈಫ್ ಲೈನ್ ಉಪಯೋಗಿಸುವ ಪ್ರಮೇಯ ಬರುವ ಮುನ್ನವೇ ಡಿಪ್ರೆಶ್ಶನ್ ತೊಲಗಿಸಿದ ಆ ಮಹಾನುಭಾವನಿಗೆ ಮನಸ್ಸಿನಲ್ಲೇ ಧನ್ಯವಾದವಿತ್ತೆ. ಅಷ್ಟರಲ್ಲಿ ಅವನೂ ಮಾತು ಮುಗಿಸಿ ನನ್ನೆಡೆ ಮುಗುಳ್ನಕ್ಕು ಹೊರಟುಹೋದ. ನಾನೂ ತಾಯಿಗೆ ಕರೆದು ಕ್ಷೇಮ ವಿಚಾರಿಸಿ ಹೊಸ ಆಹ್ಲಾದದೊಂದಿಗೆ ರೂಮಿಗೆ ವಾಪಾಸಾದೆ. ಸಂಬಂಧಿಕ, ಟೆರೇಸಿನಲ್ಲಿ ಕೇಳಿದ್ದ ಪ್ರೆಶ್ನೆಗೆ ಉತ್ತರ ಸಿಕ್ಕಿದ್ದರಿಂದ ಮೊಬೈಲಿನ ಫೋನ್ ಬುಕ್ಕಿನಲ್ಲಿ "ಡಿಪ್ರೆಶ್ಶನ್" ಸಂಬಂಧಿಕನ ಹೆಸರು ಹುಡುಕುತ್ತಾ ನನ್ನ ನೆಚ್ಚಿನ ಜಗ್‌ಜೀತ್ ಸಿಂಗ್ ಗಝಲ್ ಪ್ಲೇ ಮಾಡಿದೆ...
ಸಚ್ ಏ ಹೈ ಬೇಕಾರ್ ಹಮೇ ಗಮ್ ಹೋತಾ ಹೈ...
ಜೋ ಚಾಹಾ ಥಾ ದುನಿಯಾ ಮೆ ಕಮ್ ಹೋತಾ ಹೈ...




Sunday, May 23, 2010

ಮಂಗಳೂರು ವಿಮಾನ ಅಪಘಾತದಲ್ಲಿ ಅಗಲಿದ ಚೇತನಗಳಿಗೆ ಕವನ ಕಂಬನಿ


ವಿಧಿಯಾಟದ ವಿಚಿತ್ರ
ನಿಯಮಗಳ ಅರಿವಿಲ್ಲ
ಬಡಪಾಯಿ ಮಾನವನಿಗೆ;
ಪೂರ್ವ ಕರಾವಳಿಗಷ್ಟೇ ಅಲ್ಲ
ಪಶ್ಚಿಮ ದಂಡೆಗೂ ಬಡಿದಿದೆ
ಭೀಕರ ಬಿರುಗಾಳಿಯೊಂದು.

ಬಿರುಗಾಳಿಯು ತಂದಿದ್ದ
ತುಂತುರು ಮಳೆ
ಸುಡುಮದ್ದಿನಂತೆ ಸುರಿದು
ಹೃದಯವೀಗ ಸುಡುತ್ತಿದೆ

ಆಪ್ತರ ಒಡನಾಟವೀಗ
ಬರೇ ನೆನಪುಗಳೆಂದು
ನಂಬಲು; ಮನಸು
ಹರಸಾಹಸ ಪಡುತ್ತಿದೆ

ಮನದ ಬೇಗುದಿಯನು
ಬಣ್ಣಿಸಲಿ ಹೇಗೆ....
ಬಂಧುಗಳ ಹೊತ್ತು
ಹಾರಿ ಬಂದಿದ್ದ ಹಕ್ಕಿಯೊಂದು
ಗೂಡಿಗೆ ಸೇರುವಷ್ಟರಲ್ಲಿ
ಎಡವಿ ಬಿದ್ದಿತು ಹೇಗೆ?

ಜಡಿಮಳೆಯ ರೂಪ ತಾಳಿವೆ
ತುಂತುರು ಮಳೆ ಈಗ;
ನೀರಿನ ರಭಸಕೆ
ಸುಖವೆಲ್ಲಾ ಕೊಚ್ಚಿ ಹೋಗಿದೆ
ನೆರೆ ತುಂಬಿ, ಕಾಣದ ದಾರಿಯಲಿ
ಮುಂದೆ ಹೋಗಲಿ ಹೇಗೆ???

Monday, May 17, 2010

ಕರೆ-ಕಿರಿ

ಮೊಬೈಲ್ ಗುರ್ರೆ‍ಂದಿತು
ಎತ್ತಿ, ಕಿವಿಗೊತ್ತಿದೆ
ಬಂತವಳ "ಹಲೋ"
ಕೇಳಿ ಕ್ಷಣದಲಿ ಕರಗಿದೆ
ಬಿಸಿ ಪೂರಿಯ ಮೇಲಿನ ಬೆಣ್ಣೆಯಂತೆ
ಕಿವಿತಮಟೆ ಹುಚ್ಚೆದ್ದು ಕುಣೀತಿದೆ
ಎದೆಬಡಿತ ಹೆಚ್ಚಾಗಿ ಸ್ಪೋಟಿಸುವಂತಿದೆ
ಆ ಎರಡಕ್ಷರದ ಮೋಡಿ
ರಹ್ಮಾನ್ "ಜೈಹೋ",
ಬಚ್ಚನ್ "ಹಾಂಯಿ" ,
ಗಣೇಶ್ "ಈ-ದಿಲ್" ಅಂದಂತೆ
ಕಿವಿಗೆ ಸಚಿನ್ "ದ್ವಿಶತಕ"ದ ಸಂಭ್ರಮ
ಅಂಟಿದ್ದ ಫೋನನ್ನು ಇನ್ನಷ್ಟೊತ್ತಿ

"ಎಸ್ ಹೇಳಿ"...

"ಇದು ನಿಮ್ಮ ಬ್ಯಾಂಕಿಂದ ಕರೆ"
(ಬೇಕೆ ನಿಮಗೆ ಕ್ರೆಡಿಟ್ ಕಾರ್ಡಿನ ಹೊರೆ?!)

ಎದೆಬಡಿತ, ಅಲ್ಲೆ ಸ್ತಗಿತ
ಕೇಳಿದ್ದ ಮಾತೆಲ್ಲ ಅಪಸ್ವರ
ಜೈಹೋ ಕರ್ಕಶ ರೀಮಿಕ್ಸಾದಂತೆ
ಬಚ್ಚನ್ ಗಲತ್ ಜವಾಬೆಂದಂತೆ
ಗಣೇಶ್ ಈ ಬಿಕ್ನಾಸಿ ಮಳೆಯೆಂದಂತೆ
ಸಚಿನ್ ಶೋನ್ಯಕ್ಕೆ ಕ್ಲೀನ್ ಬೌಲ್ಡ್

"ಯಾರ್ ಕೊಟ್ರೀ ನನ್ ನಂಬರ್"
"ಫೋನ್ ಇಡ್ರೀ ಇದು ರಾಂಗ್ ನಂಬರ್"

-ಶಫಿ

Wednesday, May 5, 2010

ಕಗ್ಗೊಲೆ

ನಿನ್ನ ನಗುವೊಂದು
ಮೋಹದ ಬಲೆ
ನೀ ತುಟಿ ಸಡಿಲಿಸಿ,
ಬಲೆ ಹರಡಿಸಿ
ತೆಕ್ಕೆಗೆ ಬಿದ್ದ ರಸಿಕ ಮತ್ಸ್ಯಗಳು
ನೋವಲಿ ಚಡಪಡಿಸಿ
ಆಗುತಿದೆ ಕಗ್ಗೊಲೆ...