ಬೆಂಗಳೂರಿನ "ಮದಿರಾಕ್ಷಿ"ಯರಿಗೆ ಯಾವ ಬಟ್ಟೆ ತೊಡಿಸಬೇಕೆಂದು ಪೋಲಿಸ್ ಅಧಿಕಾರಿಯೊಬ್ಬರು ಬಾರ್, ಕ್ಲಬ್, ಪಬ್ ಮಾಲೀಕರಿಗೆ ತಾಕೀತು ಮಾಡಿದ್ದಾರಂತೆ. "ತುಂಡು" ಬಟ್ಟೆಯಿಂದಾಗಿ ಗುಂಡು ಹಾಕುವ ಮುನ್ನವೇ ಬರುವ ಜನಗಳಿಗೆ ಮತ್ತೇರಬಾರದೆಂದು ಅವರ ಈ ಕ್ರಮದ ಹಿಂದಿನ ಉದ್ದೇಶವಿರಬಹುದು. ಅಥವಾ "ಸಭ್ಯ" ಬಟ್ಟೆ ತೊಟ್ಟು ಅಸಭ್ಯ ಕೆಲಸ ಮಾಡಿರಿ ಎಂಬ ಕಿವಿಮಾತು ಹೇಳಲೆತ್ನಿಸುತ್ತಿರಲೂಬಹುದು. ಅದೇನೇ ಇದ್ದರೂ ಇವರ ಹೇಳಿಕೆ ತೀರಾ ಹಾಸ್ಯಾಸ್ಪದವೆನಿಸುತ್ತದೆ. "ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು" ಎಂದು ಮಾಲಾಶ್ರೀ ಹಾಡಿರುವಾಗ ಇನ್ನು ಗಂಡಿನೊಳಗೆ ಗುಂಡು ಹೊಕ್ಕರೆ?! ಅವನ ಅವತಾರ ಹೇಗಿರಬಹುದು, ಮಾಡುವ ಅವಾಂತರ ಯಾವ ರೀತಿಯದ್ದಿರಬಹುದು. ಈ "ಸಭ್ಯ ಬಟ್ಟೆ", ಹುಡುಗಿಯರನ್ನು ಎಷ್ಟರ ಮಟ್ಟಿಗೆ ಕಿರುಕುಳದಿಂದ ರಕ್ಷಿಸಬಹುದು?
ನನ್ನ ಅಪ್ತ ಗೆಳೆಯರಲ್ಲಿ ಹಲವರು "ಮಧ್ಯ ಪ್ರಿಯ"ರು. ಇವರನ್ನು ಪ್ರೀತಿಯಿಂದ "ಕುಡಿ"ಗಳೆನ್ನುತ್ತೇವೆ ನಾವೆಲ್ಲಾ. ಕಾಲೇಜಿನಲ್ಲಿದ್ದಾಗ, ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಹೆಚ್ಚಾಗಿ ಗುಂಡು ಹಾಕುತ್ತಿದ್ದ ಗೆಳೆಯರೊಂದಿಗೆ ಕೈಯಲ್ಲೊಂದು ಪೆಪ್ಸಿ ಟಿನ್ ಹಿಡಿದು ನಾನೂ ಕುಳಿತಿರುತ್ತಿದ್ದೆ. ಕುಡಿದ ಅಮಲಿನಲ್ಲಿ ಅವರಾಡುವ ಮಾತುಗಳು, ಅವರ ಹಾವ ಭಾವ, ನಗೆ, ಕುಣಿತಗಳೆಲ್ಲಾ ಪೆಚ್ಚಾಗಿ ಕುಳಿತಿರುತ್ತಿದ್ದ ನನಗೊಂದು ಪುಕ್ಕಟೆ ಮನರಂಜನೆ!. ಅಥವಾ ಈ ಕಾರಣದಿಂದಲೇ ಅವರೊಂದಿಗೆ ಕುಳಿತಿರುತ್ತಿದ್ದೆ ಎನ್ನಬಹುದೇನೋ. ಕುಡಿತದ ಮತ್ತಿನಲ್ಲಿ ಪುರುಷನೊಬ್ಬ ಪ್ರಾಮಾಣಿಕನಾಗುವುದು, ಭಾವುಕನಾಗುವುದು, ಕ್ರೌರ್ಯ ರೂಪ ತಾಳುವುದನ್ನು ನಾನು ಹಲವಾರು ಬಾರಿ, ಹಲವಾರು ಪ್ರಾತ್ಯಕ್ಷಿಕೆಗಳ ಮೂಲಕ ಕಂಡಿದ್ದೇನೆ. ಕೆಲವೊಮ್ಮೆ ಇವರುಗಳ ಅವತಾರ, ಅವಾಂತರವನ್ನು ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡುವ "ಸ್ಟಿಂಗ್ ಆಪರೇಶನ್"ಗೂ ಕೈಹಾಕಿದ್ದುಂಟು.
ನಾನು ನೋಡಿರುವ ಕುಡಿಗಳಲ್ಲಿ ಹೆಚ್ಚಿನವರು ಅತಿಭಾವುಕರಾಗುವ "ಭಾವುಕ ಕುಡಿ"ಗಳು. ಇವರು ಹೆಚ್ಚಾಗಿ "ಒತ್ತಡ"ದಲ್ಲಿದ್ದೇನೆಂಬ ನೆಪವೊಡ್ಡಿ ಕುಡಿಯುವವರು. ನಿನ್ನೆ ಮೊನ್ನೆ ಪರಿಚಿತನಾದ ಗೆಳೆಯನನ್ನೂ "ನೀನೇ ನನ್ನ ಆಜನ್ಮ ಬಂಧು, ನನ್ನ ಪ್ರಾಣಸ್ನೇಹಿತ" ಎಂದು ಗದ್ಗದಿತ ಕಂಠದಿಂದೊಂದಿಗೆ ಉದ್ಗರಿಸುತ್ತಾರವರು. ಗೆಳೆತನದ, ಪ್ರೀತಿಯ "ಅಮಲಿನಲ್ಲಿ" ಭಾವಪರವಶರಾಗಿ ನಿಮ್ಮನ್ನು ತಬ್ಬಿಕೊಳ್ಳುತ್ತಾರೆ, ಅಳುತ್ತಾರೆ. ಆದರೆ ಅವರ ಅಳುವಿನ ಕಣ್ಣೀರು ಕಣ್ಣಿನಿಂದ ಹೆಚ್ಚಾಗಿ ಮೂಗಿನಿಂದ ಇಳಿದು ಭುಜವನ್ನೆಲ್ಲಾ ತೋಯುವುದು ಜಾಸ್ತಿ. ಇದರಿಂದಾಗಿ ಗುಂಡು, ಸಿಗರೇಟಿನ ಹೊಗೆ, ಮೂಗಿನಿಂದಿಳಿದ ಅಂಟು ಕಣ್ಣೀರೆಲ್ಲಾ ಸೇರಿ ಸಹಿಸಲಾರದಂತಹಾ "ಸುವಾಸನೆ"ಯನ್ನು ನಿಮ್ಮ ಭುಜ ಹೊರಸೂಸುತ್ತದೆ. ಅದನ್ನಾಘ್ರಾಣಿಸುವ ಸೌಭಾಗ್ಯ ಕೂಡಿ ಬಂದಿತ್ತೊಮ್ಮೆ ನನಗೆ. ಅದಾದ ಮೇಲೆ ಈ ಅತಿ ಭಾವುಕರಾಗುವ "ಕುಡಿ"ಗಳಿಂದ ಕೊಂಚ ದೂರವೇ ಕುಳಿತುಕೊಳ್ಳುತ್ತೇನೆ. "ಲವ್ ಫೇಲ್ಯೂರ್" ಆದ ಗೆಳೆಯರನ್ನು ಕುಡಿದಾದ ಮೇಲೆ ನಿರ್ಜನ ಪ್ರದೇಶಕ್ಕೆ ಅಥವಾ ನಮ್ಮ ಕರಾವಳಿಯಲ್ಲಾದರೆ ಕಡಲ ತೀರಕ್ಕೆ ಕರೆದೊಯ್ಯಬೇಕೆನ್ನುವುದು ನನ್ನ ಅನುಭವದ ನುಡಿ. ಕುಡಿದಾದ ಮೇಲೆ ಅವರು ತಮ್ಮ ಇನ್ನಲ್ಲದ ಪ್ರೇಯಸಿಯನ್ನೊಮ್ಮೆ ನೆನೆದು ಮನಬಿಚ್ಚಿ ಭೀಕರವಾಗಿ ಗೋಳೋ ಎಂದು ರೋಧಿಸುತ್ತಾರೆ. ಅವರ ಆರ್ತನಾದ ನೋಡುಗರಿಗೆ ಅಸಹ್ಯವಾಗಿ ಕಂಡರೂ ಗೆಳೆಯರಾದ ನಮಗೆ (ಕುಡಿಯದಿದ್ದರೂ!) ನೋಡಿ ಕರುಳೇ ಕಿತ್ತು ಬರುತ್ತದೆ. ಹುಡುಗಿ ಕೈಕೊಟ್ಟ ಮೇಲೂ ಅವರು ಹಾಡುವ ಹಾಡು "ಅನಿಸುತಿದೆ ಯಾಕೋ ಇಂದು... ನೀನೇನೆ ನನ್ನವಳೆಂದು... ಎಂದೂ... ಎಂದೆಂದೂ..." ಅಥವಾ ಕಿಶೋರ್ ದಾ ಅವರ "ಹಮ್ ಬೇವಫಾ ಹರ್‌ಗಿಝ್ ನ ಥೇ... " ಎಂದು.
ಕುಡಿತದ ಅಮಲು ಕೆಲವರನ್ನು ಕೆರಳಿದ ವ್ಯಾಘ್ರವನ್ನಾಗಿಸಿ ಹೂಂಕರಿಸುವಂತೆ ಮಾಡುತ್ತದೆ. ಈ ಅವತಾರ ಪಡೆಯುವವರು ಹೆಚ್ಚಾಗಿ ಕೃಶಕಾಯದ ವ್ಯಕ್ತಿಗಳೆನ್ನುವುದೊಂದು ಸ್ವಾರಸ್ಯ. ತಿಂಗಳುಗಳ ಹಿಂದೆ ಯಾರೋ ಏನೋ ಹೇಳಿದ್ದು ಹಠಾತ್ತಾಗಿ ನೆನಪಿಗೆ ಬಂದು ನಖಶಿಖಾಂತ ಕೆಂಡಮಂಡಲವಾಗುತ್ತಾರವರು. ಒಮ್ಮೆಲೆ ಎದ್ದೇಳಿ, ಈಗಲೇ ಹೋಗಿ ಕೊಚ್ಚಿ ಕೊಲ್ಲುವ ಮಾತನ್ನಾಡುತ್ತಾರೆ. ಜೊತೆಗೆ ಕುಳಿತವರಲ್ಲಾದರೂ ಎನೋ ಅಂದಿದ್ದರೆ ಸುಖಾಸುಮ್ಮನೆ ಅವರೊಂದಿಗೆ ಜಗಳಿಕ್ಕಿಳಿಯುತ್ತಾರೆ. "ತಾಗ್ತಿಯೇನೋ, ನಂಗೆ ತಾಗ್ತಿಯೇನೋ, ಹುಷಾರ್" ಎಂದೆಲ್ಲಾ ಎದೆಯೊಡ್ಡುತ್ತಾ ರೊಚ್ಚಿಗೇಳುತ್ತಾರೆ. ನೆಟ್ಟಗಿದ್ದಲ್ಲಿ ಕರೆದರೂ ಬಾರದವರು ಗುಂಡು ಒಳಸೇರಿದ ಮೇಲೆ ತನ್ನ ನೆಚ್ಚಿನ ಗೆಳೆಯನ ಶತ್ರುಗಳೊಂದಿಗೆ "ಗ್ಯಾಂಗ್ ವಾರ್"ಗೆ ಹೋಗುವ ತವಕವನ್ನು ವ್ಯಕ್ತಪಡಿಸುತ್ತಾರೆ. "ನೋ ಪ್ರಾಬ್ಲಮ್... ಎಲ್ಲಾ ನನ್ಮೇಲೆ ಬಿಟ್ಬಿಡು" ಎನ್ನುತ್ತಾ ಗೆಳೆಯರ ಭರವಸೆಯ ಆಶಾಕಿರಣವಾಗಿ ಪ್ರಜ್ವಲಿಸುತ್ತಾರೆ. ಬಾರ್, ಪಾರ್ಟಿ, ಅಥವಾ "ದೊಂಪ"(ಮದುವೆಯ ಮುಂಚಿನ ರಾತ್ರಿ ಮಧುಮಗ ಕೊಡುವ ಬ್ಯಾಚುಲರ್ ಪಾರ್ಟಿ)ದಲ್ಲೆಲ್ಲಾ ಹೆಚ್ಚಾಗಿ ಇಂತಹಾ "ಕುಡಿ"ಗಳಿಂದಲೇ ಅವಾಂತರಗಳುಂಟಾಗುವುದು. ಸ್ತ್ರೀ ಶೋಷಣೆ, ಮಕ್ಕಳ ಶೋಷಣೆಗಳಂತಹಾ ಪ್ರಕರಣಗಳ ವೃದ್ಧಿಯಲ್ಲೂ ಇವರು ಕೊಡುಗೈ ದಾನಿಗಳು. ಇವರ ರೌದ್ರಾವತಾರ ನೋಡಿದಾಗಲೆಲ್ಲಾ ಮನದಲ್ಲಿ, "ಒನ್ ಮ್ಯಾನ್ ಆರ್ಮಿ"ಯಂತೆ ನಟಿಸುವ ಇವರನ್ನೇ ನೆರೆಕೆರೆಯ ದೇಶಗಳ ಮೇಲೆ ಛೂ ಬಿಟ್ಟು ಗಡಿ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಮೂಡುತ್ತದೆ. ಗಡಿ ಮುಟ್ಟುವವರೆಗೂ ಅವರ "ರೌದ್ರಾವಸ್ಥೆ"ಯನ್ನು ಕಾಪಾಡಲು ಬೇಕಾದ ಮಧ್ಯಕ್ಕೆ ಜೇಬಿನಲ್ಲಿ ಕಾಸಿಲ್ಲದ ಕಾರಣ ಈ "ಅಜೆಂಡಾ" ಕೈಬಿಡಬೇಕಾಗಿ ಬಂದು ನಿರಾಶೆಯಾಗುತ್ತದೆ. ಇದು "ರದ್ರ ಕುಡಿ"ಗಳೆಂಬ ವರ್ಗದ ಕತೆ.'
ಇನ್ನು ಕೆಲವರು "ವಿಚಿತ್ರ ಕುಡಿ"ಗಳು. ಇವರು "ಒಳಗೆ ಸೇರಿದರೆ ಗುಂಡು, ಹುಡುಗನಾಗುವನು _ _ _ _ _ _". ಆ ಬಿಟ್ಟ ಸ್ಥಳವನ್ನು ಅವರು ಕುಡಿದಾದ ನಂತರವೇ ತುಂಬಬೇಕು. ಏಕೆಂದರೆ ಇಂತಹಾ "ಕುಡಿ"ಗಳು ಗುಂಡು ಒಳಸೇರಿದ ನಂತರ ಯಾವ ರೂಪ ತಾಳುತ್ತಾರೆಂದು ನಿಖರವಾಗಿ ಹೇಳಲಾಗದು. ಈ "ಕುಡಿ"ಗಳು ಸಿಟ್ಟಾಗುತ್ತಾರೆ, ಅಳುತ್ತಾರೆ, ಕೆಲವೊಮ್ಮೆ ಊಹೆಗೂ ನಿಲುಕದ ವಿಚಿತ್ರ ಹಾವಭಾವಗಳ ಪ್ರದರ್ಶನ ನೀಡಿ ಮನಸ್ಸಿಗೆ ಮುದ ನೀಡುತ್ತಾರೆ!. ಕೆಲವರು ನನಗೆ ಅದು ಬೇಕು, ನನಗೆ ಇದು ಬೇಕೆಂದು ಸಣ್ಣ ಮಗುವಿನಂತೆ ಹಠ ಮಾಡುತ್ತಾರೆ. ಹೊಸ ಕೆಲಸ ಪಡೆದು ಹೋಗುತ್ತಿದ್ದ ಸಹೋದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಗೆಳೆಯನೊಬ್ಬ ಒಮ್ಮೆಲೆದ್ದು "ಈಗ ನಮ್ಮ ಗೆಳೆಯನ ಬಗ್ಗೆ ಎಲ್ಲರೂ ಐದೈದು ನಿಮಿಷ ಮಾತನಾಡಬೇಕು" ಎಂದು ಹೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಂಡಿದ್ದರು. ಒಬ್ಬ ಮನುಷ್ಯನ ಮಾನವನ್ನು ಹೇಗೆ ಐದೇ ನಿಮಿಷದಲ್ಲಿ ಹರಾಜು ಮಾಡಬೇಕೆಂಬ ಪ್ರಾತ್ಯಕ್ಷಿಕೆಗೆ ಮೂಕ ಸಾಕ್ಷಿಯಾಗಿದ್ದೆ ಅಂದು ನಾನು. ಕಳಸದ "ಅಂಬ ತೀರ್ಥ"ಕ್ಕೊಮ್ಮೆ ಚಾರಣಕ್ಕೆ ಹೋಗಿದ್ದಾಗ ಗೆಳೆಯನೊಬ್ಬ ನದಿಯಾಚೆ ತನ್ನ "ಮೊಬೈಲ್" ಬಿಟ್ಟು ಬಂದಿದ್ದೇನೆಂದು ನೆನಪಿಸಿಕೊಂಡಾಗ ನಮ್ಮಲ್ಲಿದ್ದ ಪಾನಮತ್ತ ಗೆಳೆಯನೊಳಗೆ "ಲಾಲ್ ಬಹಾದೂರ್ ಶಾಸ್ತ್ರಿ"ಯವರ ಪರಾಕ್ರಮ ತುಂಬಿ ಬರಲು ತುಂಬಿ ಹರಿಯುತ್ತಿದ್ದ ನದಿಯನ್ನೇ ದಾಟಲು ಹೊರಟು "ಬಾಲ್ ಬಾಲ್ ಬಚ್ ಗಯೇ" ಎನ್ನುವ ರೀತಿಯಲ್ಲಿ ಜೀವವುಳಿಸಿಕೊಂಡ ಘಟನೆ ನೆನೆಸಿದಾಗಲೆಲ್ಲಾ ಈಗಲೂ ಮೈ ರೋಮಗಳು ನೆಟ್ಟಗಾಗುತ್ತವೆ. ಕುಡಿದಿದ್ದ ದಡಿಯ ಗೆಳೆಯನೊಬ್ಬ ವಿಚಿತ್ರ ಭಂಗಿಯಲ್ಲಿ ಕೂರಲು ಹೋಗಿ ಗಟ್ಟಿಮುಟ್ಟೆಂದು ಹೆಸರುವಾಸಿಯಾಗಿದ್ದ "ನೀಲ್ ಕಮಲ್" ಕುರ್ಚಿಯ ಕಾಲೊಂದನ್ನು ತುಂಡರಿಸಿ ಅಂಗಡಿಯವನಿಗೆ ದಂಡ ಪಾವತಿಸಿದ್ದನಲ್ಲದೇ ತುಂಡಾಗಿದ್ದ ಆ ಕುರ್ಚಿಯನ್ನು ತನ್ನ ಬೈಕಿಗೆ ಕಟ್ಟಿ ಮನೆಗೆ ಕೊಂಡೊಯ್ಯಲು ಆಣಿಯಾಗಿದ್ದ. ಕೇಳಿದರೆ "ಇದು ನನ್ದು ಕುರ್ಚಿ... ಐ ಪೇಡ್ ಫಾರ್ ದಿಸ್" ಎಂದಿದ್ದ. "ಎಸ್! ಅವನು ಹೇಳುವುದರಲ್ಲಿ ತಪ್ಪೇನಿದೆ" ಎಂಬುದು ಇನ್ನೊಬ್ಬ ಗೆಳೆಯನ ವಾದ.
ನಾನು ನೋಡಿರುವ "ಕುಡಿ"ವರ್ಯರಲ್ಲಿ ಕೊನೆಯ ಹಾಗೂ ನನ್ನ ಅಚ್ಚುಮೆಚ್ಚಿನ ಕುಡಿಗಳೆಂದರೆ "ಹಾಸ್ಯ ಕುಡಿ"ಗಳು. ಕುಡಿದ ಅಮಲಿನಲ್ಲಿ ಇವರಾಡುವ ಮಾತುಗಳು ಇವರ ಏಕ ಪಾತ್ರಾಭಿನಯದ ತುಣುಕುಗಳು ಸಿನಿಮಾ ಹಾಸ್ಯನಟರ ನಟನೆಯನ್ನೂ ಮೀರಿಸುವಂತದ್ದು. ಯಾವ ಗಂಭೀರ ವಿಷಯವನ್ನೂ ನಗೆಪಾಟಲನ್ನಾಗಿಸುವ ಕಲೆಯಲ್ಲಿ ಪಾರಂಗತರಿವರು. ಇವರೊಂದಿಗಿನ ಅನುಭವದ ಕೆಲವೇ ತುಣುಕುಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನನ್ನ ಗೆಳೆಯನೊಬ್ಬನಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಬಯಕೆ. ಅದಕ್ಕವನು ನೀಡುವ ಸ್ಪಷ್ಟನೆ "ನನ್ಗೆ ಪಾಕಿಸ್ತಾನೀ ಸಂಗೀತ ಅಂದ್ರೆ ತುಂಬಾ ಇಷ್ಟ, ಪಾಕಿಸ್ತಾನೀ ಗಾಯಕ ಆತಿಫ್ ಅಸ್ಲಂ ಇಷ್ಟ. ಸ್ಟ್ರಿಂಗ್ಸ್, ಜುನೂನ್, ರೇತ್ ಎಲ್ಲಾ ಪಾಕಿಸ್ತಾನೀ ಬ್ಯಾಂಡ್ ಸಂಗೀತ ಅಂದ್ರೆ ತುಂಬಾ ಇಷ್ಟ"!!. "ಮಧ್ಯ" ಕಟ್ಟಿ ಕೊಟ್ಟಿದ್ದ ಕಪ್ಪು ಪ್ಲಾಸ್ಟಿಕ್ ಚೀಲ ಗೆಳೆಯನೊಬ್ಬನ ಕಣ್ಣಲ್ಲಿ ನನ್ನ "ಬುರ್ಖಾ" ಆಗಿತ್ತು. "ಛೆ!... ಏನ್ ಕ್ರಿಯೇಟಿವಿಟಿ ನಿಂದು ಮಚ್ಚೀ..." ನಾನೆಂದಾಗ ಖುಷಿಯಿಂದ ನನ್ನ ತಬ್ಬಿಕೊಳ್ಳಲು ಮುಂದಾಗಿದ್ದ! ಪರಿಚಯಸ್ಥ ಹುಡುಗಿಯೊಬ್ಬಳು ಅಪಘಾತದಲ್ಲಿ ಮೃತಳಾದಳೆಂದು "ಭಾವುಕ ಕುಡಿ" ಅಳುತ್ತಿದ್ದರೆ. "ಛೆ ನೋಡೋಕೆ ತುಂಬಾ ಚೆನ್ನಾಗಿದ್ಲು" ಎಂದು ಈ ಗೆಳೆಯನ ಗೋಳು. ದೂರದರ್ಶನದಲ್ಲಿ ಸಿಖ್ಖರ "ಗುರುದ್ವಾರ"ದ ಚಿತ್ರಗಳು ಮೂಡಿಬರುತ್ತಿದ್ದಾಗ ಗೆಳೆಯ ತನ್ನ ಹೊರಳದ ನಾಲಗೆಯಿಂದ ಉಚ್ಚರಿಸಿದ ಹೆಸರಂತೂ ತೀರಾ ಅಸಹ್ಯವಾಗಿ ಕಂಡು ಟೀವಿ ಆಫ್ ಮಾಡಬೇಕಾಯಿತು ನಮಗೆಲ್ಲಾ. ("ರು" ಇದ್ದಲ್ಲಿ "ದ" ಹಾಕಿ ನೀವೇ ಉಚ್ಚರಿಸಿಕೊಳ್ಳಿ. ಥೂ ಇವನಾ!). ಗೆಳೆಯನೊಬ್ಬನ ಮನೆಯಲ್ಲಿ ನಡೆದ "ಸುರಪಾನ"ದ ಸಂಭ್ರಮಯುತ ಪಾರ್ಟಿಯ ನಂತರ ಮಲಗಲೆಂದು ಹೋದ ಗೆಳೆಯ ಪಕ್ಕನೆ ಬಂದು ತಾನು ಹೊದ್ದುಕೊಂಡ ಚದ್ದರ ಮೈಗೆ ಸರಿಯಾಗಿ ಹೊಂದುತ್ತದೆಂದಾಗ ಆಶ್ಚರ್ಯವಾಗಿ ಕೋಣೆಯ ದೀಪ ಬೆಳಗಿಸಿ ನೋಡಿದ್ದೆವು ನಾವೆಲ್ಲಾ. ನೋಡಿದರೆ... ಅವನು ಹೊದ್ದುಕೊಂಡದ್ದು ಗೆಳೆಯನ ಅಮ್ಮನ "ನೈಟಿ"!!!!.
ಇಂತಹಾ ಹಲವಾರು ಬಗೆಯ "ಕುಡಿ"ಗಳೊಂದಿಗಿನ ಒಡನಾಟದ ಅನುಭವಗಳಿವೆ ನನ್ನಲ್ಲಿ. ಇದನ್ನೆಲ್ಲಾ ಓದಿ ನೀವು ನಕ್ಕಿದ್ದರೂ ಹೇಳುವ ಉದ್ದೇಶ ಅದಾಗಿರಲಿಲ್ಲ. ಇಂತಹಾ ವ್ಯಕ್ತಿಗಳು ಸಾರ್ವಕಾಲಿಕ ಪೋಲಿಗಳೇನಲ್ಲ. ಬ್ಯಾಂಕರ್, ಇಂಜಿನಿಯರ್, ಮ್ಯಾನೇಜರ್ ಎಂದೆಲ್ಲಾ ದೊಡ್ಡ ದೊಡ್ಡ ಘನತೆ ಗೌರವಯುತ ಹುದ್ದೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜವಾಬ್ದಾರಿಯುತ "ಪುಂಡರು" ಇವರು. ಗುಂಡಿನ ಗುಂಗಿಲ್ಲದಲ್ಲಿ ಈ ವ್ಯಕ್ತಿಗಳಿಂದ ಇಂತಹಾ ನಡತೆಯನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಅವರ ಈ ಬೇಜವಾಬ್ದಾರಿಯುತ ನಡತೆಗೆ "ಮಧ್ಯ"ವೇ ಮೂಲ ಕಾರಣವೆನ್ನಲು ನನ್ನನ್ಯಾರೂ ಅಡ್ಡಿಪಡಿಸಲಾರರು. ಎಷ್ಟು ಸಭ್ಯ ಬಟ್ಟೆ ಹಾಕಿ ಮಧ್ಯ ಕೊಟ್ಟರೂ ಮತ್ತೇರಿದ ನಂತರ ಯಾವ ಬಟ್ಟೆಯೂ ಸಭ್ಯವಾಗಿರಲಾರದು. ಅಂತದ್ರಲ್ಲಿ "ಆ ಬಟ್ಟೆ ಹಾಕಿ, ಈ ಬಟ್ಟೆ ಹಾಕಬೇಡಿ" ಎಂದು ಹೇಳುತ್ತಿರುವ ಪೋಲೀಸ್ ಅಧಿಕಾರಿಗಳ ಹೇಳಿಕೆ ಒಂದು ರೀತಿ "ಮಕ್‌ಮಲ್ ಬಟ್ಟೆಯೊಳಗೆ ಚಪ್ಪಲಿಯಿಟ್ಟು ಹೊಡೆದಂತೆ". ಇಂತಹಾ "ಹಿತವಚನಗಳ" ಬಗ್ಗೆ ನಗದೇ ಇನ್ನೇನು ಮಾಡಲಿ.
ಮಧ್ಯ ದೊರೆ"ಗಳನ್ನೇ ರಾಜ್ಯಸಭೆ, ಲೋಕಸಭೆಗಳಿಗೆ ಕರೆಸಿಕೊಂಡು ಆಳುತ್ತಿರುವ ಸಭ್ಯ ರಾಜಕಾರಿಣಿಗಳ ಈ ಯುಗದಲ್ಲಿ ಮಧ್ಯ ಮುಕ್ತ ಸಮಾಜದ ಕನಸು ಮರೀಚಿಕೆಯಾಗಿದೆಯಾದರೂ ಹೆಣ್ಣನ್ನು ಅತಿ ಗೌರವದಿಂದ ಕಂಡ ಸಂಸ್ಕೃತಿಯ ಇತಿಹಾಸವಿರುವ ಈ ನಮ್ಮ ದೇಶದಲ್ಲಿ ಹೆಣ್ಣೊಂದು ಅರೆನಗ್ನ ಬಟ್ಟೆ ತೊಟ್ಟು ಇಂತಹಾ ಹೀನ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಭಟಿಸುವುದು, ಪ್ರತಿಭಟಿಸುತ್ತಿರುವವರಿಗೆ ಬೆಂಬಲ ನೀಡುವುದು ನಮ್ಮ ಕನಿಷ್ಟ ಕರ್ತವ್ಯವಾಗಿದೆ. "ಆ ಬಾರ್ ಗರ್ಲ್ ಇಂತಹಾ ಬಟ್ಟೆ ಯಾಕೆ ಉಡುತ್ತಿದ್ದಾಳೆ?" ಎಂದು ಪ್ರೆಶ್ನಿಸುವ ಬದಲು "ಮೊದಲು ಅವಳು ಅಲ್ಲಿ ಯಾಕಿದ್ದಾಳೆ?" ಎಂದು ನಾವು, ನಮಗಿಂತ ಹೆಚ್ಚಾಗಿ ಆ ಅಧಿಕಾರಿಗಳು ಪ್ರಶ್ನಿಸಿಕೊಳ್ಳಬೇಕಾಗಿದೆ.
ಶಫಿ ಸಲಾಂ
ಬಹರೈನ್
No comments:
Post a Comment