Wednesday, May 5, 2010

ನಿರೀಕ್ಷೆ

ಮತ್ತೆ ಕವಿಯಿತು ನಿರಾಶೆಯ ಕಾರ್ಮೋಡ
ಹತಾಶೆ ಜಯಿಸಿತು, ನಿರೀಕ್ಷೆಯನು ಸೋಲಿಸಿ
ಮತ್ತೆ ಮರಳಿತು ಕಟು ವಾಸ್ತವ
ಮನದ ಭ್ರಮೆಯನು ಹುಸಿಗೊಳಿಸಿ
ಇಂದೂ ಬರಲಿಲ್ಲವಳು ಮನದಂಗಳಕೆ
ಯುಗಯುಗದ ನಿರೀಕ್ಷೆಯನು ಕೊನೆಗೊಳಿಸಿ

ಅಗೋ! ಅಸ್ತಂಗತನಾದ ನೇಸರ
ಮನಮುಗಿಲಿಗೆ ಕತ್ತಲನು ಮರಳಿಸಿ
ಇಗೋ! ಅಗಲಿದ ಚಂದಿರ
ಮನಸಕೂಸನು ಇರುಳಿಡೀ ಸಂತೈಸಿ

ಮತ್ತೆ ಬಂದ ಹೊಸ ರವಿ
ಮನದಂಗಳಕೆ ತಿಳಿ ಬೆಳಕಾಗಿಸಿ
ಮತ್ತದೇ ಭ್ರಮೆ, ಮತ್ತದೇ ನಿರೀಕ್ಷೆ
ಮನದ ಭಾವಗಳನು ಹಸಿಗೊಳಿಸಿ
ಮತ್ತೆ ಹತಾಶೆ, ನಿರೀಕ್ಷೆಗಳ ಕಾಳಗ
ಅವಳು ಬರುವ ದಾರಿಗೆ ಕಣ್ಣಿರಿಸಿ

Tags: kavite

Tuesday, May 4, 2010

ಭ್ರಮೆ

ಮನದ ಕೋಟೆಯನೊಡೆದು ಹಾರಿ
ಮನುಜ ರೂಪ ತಾಳಿ
ನನ್ನೆದುರು ನಿಂತಿರುವ
ಕನಸಿನ ಕಿನ್ನರಿಯೇ
ನಿವಾರಿಸೆನ್ನ ಶಂಕೆಯನ
ಹೇಳು... ನೀ ನಿಜಾನಾ... ?

ಉಷೆಯ ಕಿರಣಗಳ ಮೋಡಿಗೆ
ಆನಂದದಿ ಮೈಮರೆತಿದ್ದಾಗ
ನನ್ನ ಖುಷಿಯಲಿ ಪಾಲ್ಗೊಳ್ಳಲು
ಎಲೆಯಿಂದ ಕರಗಿ, ಹನಿಯಾಗಿ ಬಿದ್ದು
ನನ್ನ ಗಲ್ಲವನು ಚುಂಬಿಸಿದ್ದ
ಮುಂಜಾನೆ ಮಂಜು ನೀನೇನಾ... ?

ಮನೆಯಂಗಳದಲಿ ನಭವ ನೋಡಿ
ಮೊದಲ ಮಳೆಗೆ ಹಾತೊರೆದು
ಕಣ್ಮುಚ್ಚಿ ಕೈಚಾಚಿ ನಿಂತಿದ್ದಾಗ
ನನ್ನ ಧ್ಯಾನಕೆ ಒಲಿದು
ಮೋಡವನ್ನಗಲಿ, ನನ್ನ ಸೋಕಿದ್ದ
ಮೊದಲ ಮಳೆಹನಿ ನೀನೇನಾ... ?

ಇರುಳಲಿ ನಾ ನಡೆಯಲು
ಚಂದಿರ ತಾರೆಯರು ಕೈಕೊಟ್ಟು
ಕತ್ತಲಲಿ ದಾರಿಕಾಣದೆ ಅತ್ತಿದ್ದಾಗ
ನನ್ನ ದುಃಖವ ಕಂಡು, ಕೊರಗಿ
ತನ್ನನ್ನುರಿಸಿ ಬೆಳಕಾಗಿಸಿದ್ದ
ಇರುಳ ಮಿನುಗುಹುಳು ನೀನೇನಾ... ?

ನಿನ್ನೊಲವಿಗೆ ಮನಸೋತು
ಬಿಗಿದಪ್ಪಿ ಮುದ್ದಿಸಲೆನಿಸಿದಾಗ
ನಾಚಿ ಹಿಂದೆ ಸರಿದು
ನಸುನಕ್ಕು ತಂಗಾಳಿಯಾಗಿ
ಮತ್ತೆ ಮೈಮರೆಸಿ ಹಾರಿಹೋದೆ
ನೀ ನನ್ನ ಭ್ರಮೇನಾ... ?

Saturday, April 3, 2010

ಕಾತರ

ಕಾದು ಬೇಸತ್ತು ಹಿಂತಿರುಗುತಿಹರು
ಸೇರಲು ಬಂದ ಅಭಿಸಾರಿಕೆಯರು
ನಾನೊಲ್ಲೆ ಪ್ರೀತಿಗೆನ್ನುತಿಹುದು ಮನಸು
ಯಾಕವನಿಗೆ ಅವರಲಿ ಈ ಮುನಿಸು?
ಕಾರಣ ನಾ ಕೇಳಲು
ಹೇಳಿಕೊಂಡಿತು ತನ್ನಳಲು

ನಶೆ ನಿಶೆಯಲಿ ಅಲೆದಾಡುವ ಲೋಕದಿ
ಧನಿಕನ ಸುತ್ತಲೂ ಹೆಣ್ಣಿರ ಪರಿಧಿ
ಇಂದೊಬ್ಬನಾದರೆ, ನಾಳೆ ಇನ್ನೊಬ್ಬ ಸಖ
ಕೇವಲ ದೇಹೇಚ್ಛೆಯ ಕ್ಷಣಿಕ ಸುಖ
ಅರಿತಿಹೆ ನಾನಿವರ ಪ್ರೀತಿಯ ಸತ್ಯ-ಮಿಥ್ಯ
ಬೇಡ ನನಗೀ ಅನಾಮಿಕ ಬಾಂಧವ್ಯ

ಪ್ರಿಯತಮೆಯ ಬರುವಿಕೆಗೆ ನನಗಿದೆ ಕಾತರ
ಬೇಗ ಬರಬೇಕೆಂದು ನನಗಿಲ್ಲ ಆತುರ
ತರುವಳು ಒಲವ ನಿಧಿ, ಹೃದಯ ಮಣ್ಣಲಡಗಿಸಿ
ಬೆಳಗುವಳು ಬಾಳ ದೀಪ, ನನ್ನನು ವರಿಸಿ
ಅವಳ ಪ್ರೀತಿ ನಿರ್ಮಲ, ನಿಸ್ವಾರ್ಥ, ನಿಷ್ಕಾಮ
ಅವಳೇ ನನ್ನ ಪ್ರೀತಿಯ ಪೂರ್ಣ ವಿರಾಮ.

Saturday, March 13, 2010

ಬಾಲ್ಯದ ಸವಿನೆನಪುಗಳು

ಕೈಯಲಿ ಹಿಡಿದ ಅನ್ನದ ಬುತ್ತಿ
ಬೆನ್ನ ಚೀಲದಲಿ ಹತ್ತೆಂಟು ಪುಸ್ತಕಗಳು
ಮಾಡಲು ಮರೆತಿದ್ದ ಮನೆಲೆಕ್ಕ
ಮೇಷ್ಟ್ರು ಕೊಟ್ಟಿದ್ದ ಬೆತ್ತದ ಪೆಟ್ಟುಗಳು

ಮತ್ತೆ ಸುರಿದ ಮುಂಗಾರು ಮಳೆ
ತುಂಬಿ ಹರಿಯುವ ನದಿ ನಾಲೆಗಳು
ಕಣ್ಣು ತಪ್ಪಿಸಿ ಅಪ್ಪ ಅಮ್ಮನ
ಹಿತ್ತಲಲಿ ಹಿಡಿದಿದ್ದ ಪುಟ್ಟ ಮೀನುಗಳು

ಊರಿನ ಆ ವಾರದ ಸಂತೆ
ಕೈಬೀಸಿ ಕರೆವ ಬಣ್ಣದ ಬೊಂಬೆಗಳು
ಅಮ್ಮ ಕೊಡಿಸಿದ್ದ ಕೊಬ್ಬರಿ ಮಿಠಾಯಿ
ತಿಂದು ಕೊಳೆತಿದ್ದ ಹಾಲು ಹಲ್ಲುಗಳು

ಒಂದು ತಿಂಗಳ ದಸರಾ ರಜೆ
ಗೆಳೆಯರ ಕೂಡಿ ಆಡಿದ್ದ ಆಟಗಳು
ಕಳ್ಳ ಪೋಲಿಸ್, ಜಾಜಿ ಮಲ್ಲಿಗೆ
ಗದ್ದೆ ಕೆಸರಲಿ ಓಡಿದ್ದ ಓಟಗಳು

ಕುಣಿದು ಕುಪ್ಪಳಿಸಿ ಸುಸ್ತಾದ ಜೀವ
ಕೊಳೆತ ಅಂಗಿ, ಅಮ್ಮನ ಬೈಗುಳು
ರಾತ್ರಿ ಅಜ್ಜಿಯ ಮಡಿಲಲಿ ವಾಸ
ನಿದ್ದೆ ಬರಿಸಿದ್ದ ಲಾಲಿ ಹಾಡುಗಳು

ಮರಳಿ ಬಾರದು ಆ ರಾಜಯೋಗ
ಕಳೆದಿದೆ ಬಾಲ್ಯ, ಉಳಿದಿವೆ ನೆನಪುಗಳು
ಒಂದು ಕವನದಿ ಹೇಗೆ ಹೆಣೆಯಲಿ
ಬರೆಯಲು ಸಾಲದು ನೂರು ಕವನಗಳು.


Friday, March 12, 2010

ನನ್ನ ತಂದೆ

ನನ್ನ ವಿದ್ಯಾಭ್ಯಾಸಕ್ಕೆ ತನ್ನ ಜೀವನದ ಎಲ್ಲವನ್ನು ತ್ಯಾಗ ಮಾಡಿ, ನನಗೆ ಕೆಲಸ ಸಿಗುವಷ್ಟರಲ್ಲಿ ನನ್ನಗಲಿದ ನನ್ನ ದಿವಂಗತ ತಂದೆಗೆ
ಅರ್ಪಿತ.



ನೆರಳಾಗಿ ನನ್ನ ಬಾಳ
ಸುಡು ಬಿಸಿಲಲಿ ನೀ ಬೆಂದೆ

ಸೂರಾಗಿ ನನ್ನ ಜೀವನದ
ಜಡಿ ಮಳೆಯಲಿ ನೀ ಮಿಂದೆ

ಪ್ರತಿ ದಿನವು ನೀ ಪೋಷಿಸಲು
ಮರವಾಗಿ ನಾ ನಿಂತೆ

ಫಲ ನೀಡಿ ಧನ್ಯ ನಾನಾಗಲು
ಅಗಲಿದೆ ಏಕೆ ನೀ ತಂದೆ