ಕೈಯಲಿ ಹಿಡಿದ ಅನ್ನದ ಬುತ್ತಿ
ಬೆನ್ನ ಚೀಲದಲಿ ಹತ್ತೆಂಟು ಪುಸ್ತಕಗಳು
ಮಾಡಲು ಮರೆತಿದ್ದ ಮನೆಲೆಕ್ಕ
ಮೇಷ್ಟ್ರು ಕೊಟ್ಟಿದ್ದ ಬೆತ್ತದ ಪೆಟ್ಟುಗಳು
ಮತ್ತೆ ಸುರಿದ ಮುಂಗಾರು ಮಳೆ
ತುಂಬಿ ಹರಿಯುವ ನದಿ ನಾಲೆಗಳು
ಕಣ್ಣು ತಪ್ಪಿಸಿ ಅಪ್ಪ ಅಮ್ಮನ
ಹಿತ್ತಲಲಿ ಹಿಡಿದಿದ್ದ ಪುಟ್ಟ ಮೀನುಗಳು
ಊರಿನ ಆ ವಾರದ ಸಂತೆ
ಕೈಬೀಸಿ ಕರೆವ ಬಣ್ಣದ ಬೊಂಬೆಗಳು
ಅಮ್ಮ ಕೊಡಿಸಿದ್ದ ಕೊಬ್ಬರಿ ಮಿಠಾಯಿ
ತಿಂದು ಕೊಳೆತಿದ್ದ ಹಾಲು ಹಲ್ಲುಗಳು
ಒಂದು ತಿಂಗಳ ದಸರಾ ರಜೆ
ಗೆಳೆಯರ ಕೂಡಿ ಆಡಿದ್ದ ಆಟಗಳು
ಕಳ್ಳ ಪೋಲಿಸ್, ಜಾಜಿ ಮಲ್ಲಿಗೆ
ಗದ್ದೆ ಕೆಸರಲಿ ಓಡಿದ್ದ ಓಟಗಳು
ಕುಣಿದು ಕುಪ್ಪಳಿಸಿ ಸುಸ್ತಾದ ಜೀವ
ಕೊಳೆತ ಅಂಗಿ, ಅಮ್ಮನ ಬೈಗುಳು
ರಾತ್ರಿ ಅಜ್ಜಿಯ ಮಡಿಲಲಿ ವಾಸ
ನಿದ್ದೆ ಬರಿಸಿದ್ದ ಲಾಲಿ ಹಾಡುಗಳು
ಮರಳಿ ಬಾರದು ಆ ರಾಜಯೋಗ
ಕಳೆದಿದೆ ಬಾಲ್ಯ, ಉಳಿದಿವೆ ನೆನಪುಗಳು
ಒಂದು ಕವನದಿ ಹೇಗೆ ಹೆಣೆಯಲಿ
ಬರೆಯಲು ಸಾಲದು ನೂರು ಕವನಗಳು.